Vijaypura

ವಿಜಯಪುರದಲ್ಲಿ ಬರದ ಬಿಸಿ; ರೈತರ ಅನಿರ್ದಿಷ್ಟಾವಧಿ ಹೋರಾಟ

Share

ವಿಜಯಪುರ ಜಿಲ್ಲೆಯಲ್ಲಿ ಬರದ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಸರ್ಕಾರ ಮಾತ್ರ ಜಿಲ್ಲೆಯ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ 13 ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಳಿದಿದೆ. ಈ ಕುರಿತು ಒಂದು ವರದಿ…

ಮಳೆ ಕೈಕೊಟ್ಟಿದೆ… ಹೊಲದಲ್ಲಿ ಬೆಳೆ ಒಣಗಿದೆ… ಜಾನುವಾರುಗಳಿಗೆ ಮೇವು-ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನೇ ನಂಬಿಕೊಂಡಿರುವ ವಿಜಯಪುರ ಜಿಲ್ಲೆಯ ರೈತರ ಬದುಕು ಬರದ ಹೊಡೆತಕ್ಕೆ ನಲುಗಿದೆ. ಜಿಲ್ಲೆಯ 13 ತಾಲೂಕುಗಳಲ್ಲೂ ಬರದ ಪರಿಸ್ಥಿತಿ ಇದ್ದರೂ, ಸರ್ಕಾರ ಕೇವಲ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬರದ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದೆ. ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಇನ್ನೂ ವಿಜಯಪುರ ಜಿಲ್ಲೆಯ 13 ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಬೇಕು, ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು. ಬೆಳೆವಿಮೆ ಪಾವತಿಸಿರುವ ರೈತರಿಗೆ ಶೇ.50ರಷ್ಟು ಮಧ್ಯಂತರ ವಿಮೆ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಎಲ್ಲ ಹಳ್ಳ, ಕೊಳ್ಳ, ಕೆರೆ ಹಾಗೂ ಕಾಲುವೆಗಳನ್ನು ಭರ್ತಿ ಮಾಡಬೇಕು, ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸಬೇಕು ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಜಯಪುರವನ್ನು ಸಂಪೂರ್ಣ ಬರಗಾಲ ಜಿಲ್ಲೆ ಎಂದು ಘೋಷಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲ ಶಾಸಕರು ರಾಜೀನಾಮೆ ನೀಡಿ ರೈತರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಇದು ಕೇವಲ ರೈತರ ಹೋರಾಟವಲ್ಲ… ತನ್ನ ಬೆವರಿನಿಂದ ಅನ್ನ ಬೆಳೆಯುವ ಅನ್ನದಾತನ ಬದುಕಿನ ಪ್ರಶ್ನೆ. ಹೊಲದಲ್ಲಿ ಬೆಳೆ ಇಲ್ಲ, ಜಾನುವಾರುಗಳಿಗೆ ಮೇವು ಇಲ್ಲ, ಕೈಯಲ್ಲಿ ಹಣವಿಲ್ಲ… ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರು ಕೇಳುತ್ತಿರುವುದು ಯಾವುದೇ ಐಷಾರಾಮಿ ಬೇಡಿಕೆಯಲ್ಲ, ಬದುಕುಳಿಯಲು ಬೇಕಾದ ನ್ಯಾಯಯುತ ಪರಿಹಾರ.
ಜಿಲ್ಲೆಯ 13 ತಾಲೂಕುಗಳಲ್ಲೂ ಬರದ ವಾಸ್ತವ ಸ್ಥಿತಿ ಇರುವಾಗ ಕೇವಲ ಮೂರು ತಾಲೂಕುಗಳಿಗೆ ಬರದ ಪಟ್ಟ ಸೀಮಿತ ಗೊಳಿಸುವುದು ಅನ್ನದಾತನ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು… ಕಡತಗಳಲ್ಲಲ್ಲ, ರೈತರ ಹೊಲಗಳಿಗೆ ಇಳಿದು ಬರದ ವಾಸ್ತವ ಅರಿತು ತಕ್ಷಣ ಪರಿಹಾರ ಘೋಷಿಸಬೇಕು. ಇಲ್ಲವಾದರೆ ಇದೇ ನಿರ್ಲಕ್ಷ್ಯ ನಾಳೆ ದೊಡ್ಡ ರೈತ ಆಕ್ರೋಶಕ್ಕೆ ಕಾರಣ ವಾಗಬಹುದು.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!