ರಕ್ತದಾನವು ಸರ್ವಶ್ರೇಷ್ಠ ದಾನವಾಗಿದ್ದು, ಮತ್ತೊಬ್ಬರ ಜೀವ ಉಳಿಸುವ ಅತ್ಯಂತ ಪವಿತ್ರ ಕಾರ್ಯವಾಗಿದೆ. ರಕ್ತಕ್ಕೆ ಯಾವುದೇ ಕೃತಕ ಪರ್ಯಾಯವಿಲ್ಲ. ಹೀಗಾಗಿ ಒಬ್ಬ ಮಾನವನಿಗೆ ಅಗತ್ಯವಿರುವ ರಕ್ತವನ್ನು ಮತ್ತೊಬ್ಬ ಮಾನವನಿಂದಲೇ ಪಡೆಯಬೇಕಾಗಿದೆ ಎಂದು ಕಾಗವಾಡ ಹಾಗೂ ಅಥಣಿ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಹೇಳಿದರು.


ಗುರುವಾರ ಬೆಳಿಗ್ಗೆ ಐನಾಪುರದ ಕೆಆರ್ಇಎಸ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಹಾಗೂ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು. ಆರಂಭದಲ್ಲಿ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಅಥಣಿ ಹೆಲ್ತ್ ಅಂಡ್ ಸೋಶಿಯಲ್ ಸರ್ವಿಸ್ ರಕ್ತ ಸಂಗ್ರಹ ಕೇಂದ್ರದ ವ್ಯವಸ್ಥಾಪಕ ಮೆಹಬೂಬ್ ಮುಜಾವರ್ ಹಾಗೂ ಸಿಬ್ಬಂದಿ ರಕ್ತ ಸಂಗ್ರಹಿಸುವ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.
ಸೆಪ್ಟೆಂಬರ್ 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಗುರು ಶಿಕ್ಷಕ ನಮನ-2026’ ಕಾರ್ಯಕ್ರಮದ ನಿಮಿತ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸುಮಾರು 250 ಶಿಕ್ಷಕರು, ಸಾರ್ವಜನಿಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ, ತಾಲೂಕು ಮಟ್ಟದ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡು ಹಿರಿಯ ಅಧಿಕಾರಿಗಳ ಕರೆಗೆ ಉತ್ತಮ ಸ್ಪಂದನೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಮಾತನಾಡಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ ಅವರ ಸಂದೇಶದ ಮೇರೆಗೆ ಜಿಲ್ಲೆಯಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಅದರಂತೆ ಕಾಗವಾಡದಲ್ಲಿಯೂ ಎಲ್ಲ ಇಲಾಖೆಗಳ ಸಿಬ್ಬಂದಿಯ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ ಎಂದು ಹೇಳಿದರು.
ಕಾಗವಾಡ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಿಂಗ ರಾಮಯ್ಯ ಮಾತನಾಡಿ, ತಾಲೂಕಿನ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಹಿರಿಯ ಅಧಿಕಾರಿಗಳ ಸಂದೇಶದ ಮೇರೆಗೆ ಶಿಬಿರ ಯಶಸ್ವಿಯಾಗಿ ನೆರವೇರಿದೆ. ಸೆಪ್ಟೆಂಬರ್ 5ರಂದು ಐನಾಪುರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಐನಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮವ್ವ ಸುರೇಶ್ ಅಡಿಕೇರಿ, ಸದಸ್ಯರಾದ ಪ್ರವೀಣ್ ಗಾಣಿಗೇರ್, ಅರುಣ ಗಾಣಿಗೇರ್, ಸಂಜಯ್ ಬಿರಡಿ, ಬಾಬಾ ಜಂತನವರ ಸೇರಿದಂತೆ ಇತರ ಸದಸ್ಯರು, ಮುಖ್ಯಾಧಿಕಾರಿ ಮಾಂತೇಶ್ ಕೌಲಾಪುರೆ, ಸಿಡಿಪಿಒ ಸಂಜುಕುಮಾರ್ ಸದಲಗೆ, ಶಿಕ್ಷಣಾಧಿಕಾರಿ ಪಿ.ಬಿ. ಮದಭಾವಿ, ಕೆ.ಬಿ. ತಳವಾರ್, ಭರತ ಟೂನೆಗೆ, ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್ ಗಾಣಿಗೇರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಭೋವಿ ಸೇರಿದಂತೆ ಅನೇಕರು ಶಿಬಿರದ ಯಶಸ್ಸಿಗೆ ಸಹಕರಿಸಿದರು.
