ಸಚಿವ ವಿಜಯಾನಂದ ಕಾಶಪ್ಪನವರ ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮುಲು ಒಬ್ಬ ಜೋಕರ್ ಇದ್ದಂತೆ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮಾಡಿರುವ ಪುಣ್ಯ ಕಾರ್ಯಗಳನ್ನು ಜನ ತಿರಸ್ಕರಿಸಿದ್ದಾರೆಂದು ಲೇವಡಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಮುಗಳೋಳ್ಳಿ ತಾಂಡಾ ಶಾಲೆ ಕೊಠಡಿ ಮೇಲ್ಚಾವಣಿ ಕುಸಿತದ ಗಾಯಾಳು ವಿದ್ಯಾರ್ಥಿಗಳ ಆರೋಗ್ಯವನ್ನು ಸಚಿವ ವಿಜಯಾನಂದ ಕಾಶಪ್ಪನವರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಈ ವೇಳೆ ಡಿಡಿಪಿಐ, ಬಿಇಓ ಹಾಗೂ ಜಿಲ್ಲಾಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು. 8 ವಿದ್ಯಾರ್ಥಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲದಂತಾಗಿದೆ ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮಾಡಿರುವ ಪುಣ್ಯ ಕಾರ್ಯಗಳನ್ನು ಜನ ತಿರಸ್ಕಾರ ಮಾಡಿದ್ದಾರೆ. ಕೇವಲ ಪ್ರಚಾರ, ಶೋ ಮತ್ತು ಅಸ್ತಿತ್ವಕ್ಕಾಗಿ ಈ ಪಾದಯಾತ್ರೆ ನಡೆಯುತ್ತಿದೆಯೇ ಹೊರತು, ಇದರಿಂದ ಜನರಿಗೆ ಅಥವಾ ರೈತರಿಗೆ ಯಾವುದೇ ಒಳಿತಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ವಿರೋಧ ಪಕ್ಷದವರನ್ನು ತೀವ್ರವಾಗಿ ಲೇವಡಿ ಮಾಡಿದ ಸಚಿವರು, ಬಿ. ಶ್ರೀರಾಮುಲು ಒಬ್ಬ ಜೋಕರ್ ಇದ್ದಂತೆ ಹಾಗೂ ಅವರ ಸ್ವಪಕ್ಷದಲ್ಲೇ ಅವರನ್ನು ಜೋಕರ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಟೀಶರ್ಟ್ ಹಾಕಿಕೊಂಡು ಓಡಾಡುವ ಶ್ರೀರಾಮುಲು, ರಾಹುಲ್ ಗಾಂಧಿ ಅವರಂತೆ ಆಗಲು ಹೊರಟಿದ್ದಾರೆ ಎಂದು ಟೀಕಿಸಿದರು. ಬರಗಾಲ ವೀಕ್ಷಣೆಗಾಗಿ ಸರ್ಕಾರಿ ಸಚಿವರು ಸ್ಥಳಕ್ಕೆ ತೆರಳಿ ರೈತರಿಗೆ ಇನ್ಶೂರೆನ್ಸ್ ಸೇರಿದಂತೆ ಎಲ್ಲ ಪರಿಹಾರ ಕಾರ್ಯಗಳನ್ನು ಒದಗಿಸುತ್ತಿದೆ ಎಂದರು.
