ಕಳೆದ 18 ವರ್ಷಗಳಿಂದ ತಾತ್ಕಾಲಿಕ ಶೆಡ್‌ಗಳಲ್ಲೇ ಬದುಕು ದೂಡುತ್ತಿದ್ದ ಮಲಪ್ರಭಾ ಸಂತ್ರಸ್ತರು ಈಗ ದಿಢೀರ್ ಅಗ್ನಿ ಅವಘಡದಿಂದ ನೆಲೆ ಕಳೆದುಕೊಂಡು ಬೀದಿಬೀದಿóಗೆ ಬರುವಂತಾಗಿದೆ. ಶಾಶ್ವತ ನಿವೇಶನಕ್ಕಾಗಿ 117 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಇವರ ಗೋಳು ಕೇಳುವವರಿಲ್ಲದಿರುವುದು ವ್ಯವಸ್ಥೆಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಲಪ್ರಭಾ ಪ್ರವಾಹ ಸಂತ್ರಸ್ತರು ವಾಸಿಸುತ್ತಿದ್ದ 30ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‌ಗಳು ಸುಟ್ಟು ಭಸ್ಮವಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಶೆಡ್‌ಗಳಲ್ಲಿದ್ದ ಗ್ಯಾಸ್ ಸಿಲೆಂಡರ್‌ಗಳು ಸರಣಿಯಾಗಿ ಸ್ಫೋಟಗೊಂಡು ಆತಂಕ ಸೃಷ್ಟಿಸಿದವು. ಕಳೆದ 18 ವರ್ಷಗಳಿಂದ ಶಾಶ್ವತ ನೆಲೆಗಾಗಿ ಪರದಾಡುತ್ತಿರುವ ಮತ್ತು ಇತ್ತೀಚೆಗೆ 117 ದಿನಗಳಿಂದ ನಿವೇಶನಕ್ಕಾಗಿ ಸತತ ಪ್ರತಿಭಟನೆ ನಡೆಸುತ್ತಿದ್ದ ಸಂತ್ರಸ್ತರಿಗೆ ಈ ದುರ್ಘಟನೆ ದೊಡ್ಡ ಆಘಾತ ತಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
