Bagalkote

ಘಟಪ್ರಭಾ ಕಾಲುವೆಗೆ ನೀರು ಹರಿಸುವಂತೆ ಲೋಕಾಪೂರದಲ್ಲಿ ರಸ್ತೆ ಬಂದ್!

Share

ಮಳೆ ಇಲ್ಲದೆ, ಬೆಳೆದ ಬೆಳೆಗಳೆಲ್ಲ ಕಣ್ಣೆದುರೇ ಒಣಗಿ ಹೋಗುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟಪ್ರಭಾ ಬಲದಂಡೆ ಕಾಲುವೆಗೆ ತಕ್ಷಣವೇ ನೀರು ಬಿಡುವಂತೆ ಆಗ್ರಹಿಸಿ, ಮುಧೋಳ ತಾಲೂಕಿನ ಲೋಕಾಪೂರದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ರೈತರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಳಗಾವಿಯಿಂದ ಬಾಗಲಕೋಟೆ ಜಿಲ್ಲೆಯವರೆಗೆ ಬರೋಬ್ಬರಿ 199 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ನೀರಿಲ್ಲದೆ ಇಡೀ ಲೋಕಾಪೂರ ಭಾಗದ ರೈತರ ಬದುಕು ಕತ್ತಲಿಗೆ ತಳ್ಳಲ್ಪಟ್ಟಿದೆ. ಒಂದೆಡೆ ಮಳೆಯ ಅಭಾವ, ಇನ್ನೊಂದೆಡೆ ಕಾಲುವೆಗೂ ನೀರು ಬಿಡದಿರುವುದರಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಅನ್ನದಾತರು ಸಂಪೂರ್ಣವಾಗಿ ಅತಂತ್ರರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಲೋಕಾಪೂರ ಪಟ್ಟಣದ ಪ್ರಮುಖ ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಿ ಧರಣಿ ಕುಳಿತಿದ್ದಾರೆ. ಸರ್ಕಾರ ಹಾಗೂ ನೀರಾವರಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಾಲುವೆಗೆ ತಕ್ಷಣವೇ ನೀರು ಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!