Bagalkote

ತರಗತಿ ನಡೆಯುತ್ತಿದ್ದ ವೇಳೆ ಕುಸಿದ ಶಾಲಾ ಕೊಠಡಿ ಮೇಲ್ಛಾವಣಿ; ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

Share

ಬಾಗಲಕೋಟೆ ತಾಲೂಕಿನ ಮುಗಳೂಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಪಾಠ ನಡೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಬಿದ್ದು, ಐದು ವಿದ್ಯಾರ್ಥಿಗಳು ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಮಕ್ಕಳನ್ನು ರಕ್ಷಿಸಿದ್ದು, ದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿದಂತಾಗಿದೆ.

ಬಾಗಲಕೋಟೆ ತಾಲೂಕಿನ ಮುಗಳೂಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 6 ನೇ ತರಗತಿವರೆಗೆ ಒಟ್ಟು 53 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಶಾಲೆಗೆ ಒಟ್ಟು ಮೂರು ಕೊಠಡಿಗಳಿವೆ. ಎಂದಿನಂತೆ 5 ಮತ್ತು 6 ನೇ ತರಗತಿಗಳ ಒಟ್ಟು 26 ಮಕ್ಕಳು ಪಾಠ ಕೇಳುತ್ತಿದ್ದ ವೇಳೆ ಏಕಾಏಕಿ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮವಾಗಿ ಸಿಮೆಂಟ್ ಚೂರುಗಳು ನಾಲ್ಕು ವಿದ್ಯಾರ್ಥಿಗಳ ತಲೆ ಹಾಗೂ ಮೈಮೇಲೆ ಬಿದ್ದು, ಪ್ರೇಮ್, ರಾಕೇಶ್, ಮಹೇಶ್, ಸುನಿತಾ ಮತ್ತು ಸತೀಶ್ ಎಂಬ ಐದು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳದಲ್ಲಿದ್ದ ಶಿಕ್ಷಕರು ಕೂಡಲೇ ಎಚ್ಚೆತ್ತುಕೊಂಡು, ಗಾಯಗೊಂಡ ಮಕ್ಕಳನ್ನು ಬಿಇಓ ವಾಹನದಲ್ಲೇ ಸ್ಥಳೀಯ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಹಳೆಯದಾದ ಶಿಥಿಲಗೊಂಡ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳದ ನಿರ್ಲಕ್ಷ್ಯದ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆಯಾದರೂ ಇಂತಹ ಅನಾಹುತಗಳು ಮರುಕಳಿಸದಂತೆ ಎಚ್ಚೆತ್ತುಕೊಳ್ಳಬೇಕಿದೆ.

Tags:

error: Content is protected !!