Vijaypura

ಕೊಳಲು ಹಿಡಿದ ಕೃಷ್ಣ… ರಾಧೆಯಾಗಿ ಕಂಗೊಳಿಸಿದ ಬಾಲೆಯರು

Share

ಹಬ್ಬಗಳ ಮೂಲಕ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪರಂಪರೆ ನಮ್ಮ ದೇಶದ್ದು. ಅಂತೆಯೇ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸ ಲಾಯಿತು. ಚಿಣ್ಣರು ರಾಧಾಕೃಷ್ಣರ ವೇಷದಲ್ಲಿ ಕಂಗೊಳಿಸಿ, ಮೊಸರಿನ ಗಡಿಗೆ ಒಡೆದು, ನೃತ್ಯದ ಮೂಲಕ ಸಂಭ್ರಮ ಹಂಚಿಕೊಂಡರು. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ…

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಮಹತ್ವವಿದೆ. ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ ಈ ದಿನ ಮನೆ-ಮನೆಗಳಲ್ಲಿ ಪೂಜೆ, ಭಜನೆ, ಕೀರ್ತನೆ, ಉಪವಾಸ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಲ್ಲ… ಪ್ರೀತಿ, ಭಕ್ತಿ, ನಂಬಿಕೆ ಹಾಗೂ ಧರ್ಮದ ಸಂದೇಶವನ್ನು ಸಾರುವ ಪವಿತ್ರ ಸಂದರ್ಭವೂ ಹೌದು. ಐತಿಹಾಸಿಕ ವಿಜಯಪುರ ನಗರದ ರವೀಂದ್ರನಾಥ ಠಾಗೋರ್ ಸಿಬಿಎಸ್ಇ ಶಾಲೆ ಹಾಗೂ ಪಿಯು ವಿಜ್ಞಾನ ಕಾಲೇಜಿನಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆಯನ್ನು ಒಟ್ಟಾಗಿ ಆಚರಿಸಲಾಯಿತು. ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಕಾರ್ಯಕ್ರಮ ಉದ್ಘಾಟಿಸಿದರು. ಚಿಣ್ಣರು ರಾಧಾಕೃಷ್ಣರ ವೇಷಭೂಷಣದಲ್ಲಿ ಕಂಗೊಳಿಸಿ ನೆರೆದವರ ಮನಸೂರೆಗೊಂಡರು. ಬಾಲಕರು ಕೃಷ್ಣನ ವೇಷದಲ್ಲಿ ಕೊಳಲು ಹಿಡಿದು ಸಂಭ್ರಮಿಸಿದರೆ, ಬಾಲಕಿಯರು ರಾಧೆಯ ವೇಷದಲ್ಲಿ ಕಣ್ಮನ ಸೆಳೆದರು.

ಇನ್ನೂ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವಂತೆ ವಿದ್ಯಾರ್ಥಿಗಳು ಮೊಸರಿನ ಗಡಿಗೆ ಒಡೆದು ಸಂಭ್ರಮಿಸಿದರು. ಚಿಣ್ಣರ ಮನಮೋಹಕ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಇದೇ ವೇಳೆ ಮಕ್ಕಳ ಸಂಭ್ರಮಕ್ಕೆ ಶಿಕ್ಷಕರು ಕೂಡ ಸಾಥ್ ನೀಡಿದರು. ತಮ್ಮ ತದ್ರೂಪಿ ವೇಷಭೂಷಣ ತೊಟ್ಟ ಮಕ್ಕಳೊಂದಿಗೆ ರ್ಯಾಂಪ್ ವಾಕ್ ಮಾಡುವ ಮೂಲಕ ಗಮನ ಸೆಳೆದರು. ಶಿಕ್ಷಕರು ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಕ್ಷಣಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದವು. ತಮ್ಮ ಮಕ್ಕಳನ್ನು ರಾಧಾಕೃಷ್ಣರ ವಿವಿಧ ವೇಷಗಳಲ್ಲಿ ಕಂಡ ಪಾಲಕರು ಸಂತಸ ವ್ಯಕ್ತಪಡಿಸಿದರು. ಇಂತಹ ಆಚರಣೆಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹಬ್ಬಗಳ ಮಹತ್ವದ ಕುರಿತು ಅರಿವು ಮೂಡಿಸುವ ಜೊತೆಗೆ, ಸಂಭ್ರಮವನ್ನು ಒಗ್ಗಟ್ಟಿನಿಂದ ಹಂಚಿಕೊಳ್ಳುವ ಮನೋಭಾವ ಬೆಳೆಸುತ್ತವೆ. ಇದೇ ವೇಳೆ ಶಿಕ್ಷಕರ ದಿನಾಚರಣೆ ಯನ್ನೂ ಅರ್ಥ ಪೂರ್ಣವಾಗಿ ಆಚರಿಸ ಲಾಯಿತು. ಭಾರತದ ಎರಡನೇ ರಾಷ್ಟ್ರಪತಿ, ಮಹಾನ್ ತತ್ವಜ್ಞಾನಿ ಹಾಗೂ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿ, ಜ್ಞಾನ ಮತ್ತು ಸಂಸ್ಕಾರದ ಬೆಳಕನ್ನು ನೀಡುವ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ದಿನವಾಗಿದೆ.

ಒಟ್ನಲ್ಲಿ ನಮ್ಮ ದೇಶದ ಹಬ್ಬಗಳು ಕೇವಲ ಆಚರಣೆ ಗಳಲ್ಲ… ಅವು ನಮ್ಮ ಸಂಸ್ಕೃತಿಯ ಜೀವಾಳ. ತಲೆಮಾರಿನಿಂದ ತಲೆಮಾರಿಗೆ ಮೌಲ್ಯ, ಭಕ್ತಿ, ಪ್ರೀತಿ ಮತ್ತು ಪರಂಪರೆಯನ್ನು ಕೊಂಡೊಯ್ಯುವ ಇಂತಹ ಆಚರಣೆಗಳು ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಮಕ್ಕಳ ಮೂಲಕ ಈ ಸಂಪ್ರದಾಯಗಳು ಮುಂದುವರಿಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!