Chikkodi

ಚಿಕ್ಕೋಡಿ-ನಿಪ್ಪಾಣಿ ತಾಲೂಕಿನ ಎಲ್ಲ ಸೇತುವೆಗಳು ಸಂಚಾರಕ್ಕೆ ‌ಮುಕ್ತ, ನಿಟ್ಟುಸಿರು ಬಿಟ್ಟ ನದಿತೀರದ ಜನ

Share

ಚಿಕ್ಕೋಡಿ:ಕೃಷ್ಣಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಮುಳುಗಡೆಯಾಗಿದ್ದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಎಲ್ಲಾ ಸೇತುವೆಗಳು ಈಗ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿವೆ. ಇದರಿಂದಾಗಿ ಪ್ರವಾಹ ಭೀತಿಯಲ್ಲಿದ್ದ ನದಿತೀರದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಪ್ರಸ್ತುತ ಕಲ್ಲೋಳ ಬಳಿ ಕೃಷ್ಣಾ ನದಿಗೆ 44 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನದಿಯ ನೀರು ಹಂತ-ಹಂತವಾಗಿ ಇಳಿಕೆಯಾಗುತ್ತಿದೆ. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಸಹಜ ಸ್ಥಿತಿಗೆ ಮರಳುತ್ತಿದೆ.

ನದಿಯ ನೀರು ತಗ್ಗಿದ ಹಿನ್ನೆಲೆಯಲ್ಲಿ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಯಡೂರ-ಕಲ್ಲೋಳ ಸೇತುವೆ ಮೇಲಿನ ಸಂಚಾರ ಪುನರಾರಂಭಗೊಂಡಿದೆ. ಶ್ರಾವಣ ಮಾಸ ಹಾಗೂ ಅಮಾವಾಸ್ಯೆ ಪ್ರಾರಂಭವಾಗಿರುವ ಈ ಶುಭ ಸಂದರ್ಭದಲ್ಲಿ, ಯಡೂರ ಶ್ರೀ ವೀರಭದ್ರೇಶ್ವರ ದೇವರ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಸೇತುವೆ ತೆರವುಗೊಂಡಿರುವುದು ಅತ್ಯಂತ ಅನುಕೂಲಕರವಾಗಿದೆ.

ಸೇತುವೆಗಳು ಸಂಚಾರಕ್ಕೆ ಮುಕ್ತವಾದ್ದರಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ರಸ್ತೆ ಸಂಪರ್ಕ ಮರುಸ್ಥಾಪನೆಗೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ನಿರಾಳರಾಗಿದ್ದಾರೆ.

Tags:

error: Content is protected !!