ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಬೆಲ್ಲದ-ಬಾಗೇವಾಡಿ ರಸ್ತೆಯಲ್ಲಿ ತಡರಾತ್ರಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಡೆದಿದೆ.

ಕಬ್ಬೂರು ಪಟ್ಟಣದ ಹಿರೇಕುರಬರ ತೋಟದ ನಿವಾಸಿ ಪ್ರವೀಣ ರಾಮಪ್ಪ ಹಿರೇಕುರಬರ (೩೫) ಮೃತಪಟ್ಟ ದೌರ್ಭಾಗ್ಯಕರ ವ್ಯಕ್ತಿಯಾಗಿದ್ದಾರೆ.
ಮೃತ ಪ್ರವೀಣ ಅವರು ಪಟ್ಟಣದಿಂದ ಮನೆಗೆ ಸಾಮಗ್ರಿಗಳನ್ನು ಖರೀದಿಸಿ ತಮ್ಮ ಬೈಕ್‌ನಲ್ಲಿ ತೋಟದ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಮುಂಭಾಗದಲ್ಲಿ ಚಲಿಸುತ್ತಿದ್ದ ಬೊಲೆರೊ ವಾಹನವನ್ನು ಓವರ್‌ಟೇಕ್ (ಹಿಂದಿಕ್ಕಲು) ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬೆಲ್ಲದ-ಬಾಗೇವಾಡಿ ಕಡೆಯಿಂದ ಎದುರಿಗೆ ಬಂದ ಲಾರಿಗೆ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಪ್ರವೀಣ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪಿಎಸ್‌ಐ ಬಸಗೌಡ ನೇರ್ಲಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
