ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಭಕ್ತಿಯ ಪರಾಕಾಷ್ಠೆಯೊಂದಿಗೆ ಮೈನವಿರೇಳಿಸುವ ಸಾಹಸಮಯ ದೃಶ್ಯಗಳು ಕಂಡುಬಂದಿವೆ. ಕಡ್ಡಿರಾಂಪುರ ಗ್ರಾಮದ ಮುರುಗನ್ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಭಕ್ತರು ವಿಶಿಷ್ಟ ಹರಕೆ ತೀರಿಸಿದ್ದು, ಬೆನ್ನಿಗೆ ಕಬ್ಬಿಣದ ಕೊಂಡಿ ಹಾಕಿ ಕಲ್ಲು, ಆಟೋ ಎಳೆದ ಭಕ್ತರು ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿದ್ದಾರೆ.


ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಶ್ರೀ ಮುರುಗನ್ ದೇವಸ್ಥಾನದ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಅಷ್ಟೇ ಸಾಹಸಮಯವಾಗಿ ಜರುಗಿದೆ. ಗ್ರಾಮದ ಹೊರವಲಯದಲ್ಲಿರುವ ಕಾಲುವೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತಾದಿಗಳು, ಅಲ್ಲಿಂದಲೇ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಲು ಪ್ರಾರಂಭಿಸಿದರು. ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಈ ಜಾತ್ರೆಯಲ್ಲಿ, ಮುರುಗನ್ ದೇವರಿಗೆ ತಂತಮ್ಮ ಹರಕೆ ರೂಪದಲ್ಲಿ ದೇಹ ದಂಡನೆ ಮಾಡಿಕೊಳ್ಳುವ ದೃಶ್ಯಗಳು ಕಣ್ಣಿಗೆ ಕಟ್ಟುವಂತಿದ್ದವು.

ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಭಕ್ತರು ತಮ್ಮ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಂಡಿ ಹಾಗೂ ಸರಳುಗಳನ್ನು ಚುಚ್ಚಿಕೊಂಡು ದೊಡ್ಡ ಕಲ್ಲುಗಳನ್ನು ಮತ್ತು ಆಟೋಗಳನ್ನು ಎಳೆಯುವ ಸಾಹಸ ಮಾಡಿದರು. ಅಷ್ಟೇ ಅಲ್ಲದೆ, ಜೆಸಿಬಿ ಯಂತ್ರಗಳಿಗೆ ಹಗ್ಗಗಳನ್ನು ಕಟ್ಟಿ ಗಾಳಿಯಲ್ಲಿ ಉಯ್ಯಾಲೆಯಂತೆ ತೇಲಾಡುತ್ತಾ ತಮ್ಮ ಇಷ್ಟದೈವಕ್ಕೆ ಹರಕೆ ತೀರಿಸಿದರು. ಕಣ್ಣು ಕೊರೆಸುವಂತಿದ್ದ ಈ ಮೈನವಿರೇಳಿಸುವ ಸಾಹಸ ಹಾಗೂ ಅಪಾರ ಭಕ್ತಿಯ ಸನ್ನಿವೇಶವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತಗಣ ಧನ್ಯತಾಭಾವ ಮೆರೆಯಿತು.
