ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಳಪೆ ಕಾಮಗಾರಿಯಿಂದಾಗಿ ನೀರು ಮುಗಿಲೆತ್ತರಕ್ಕೆ ಚಿಮ್ಮಿ ಜಮೀನುಗಳಿಗೆ ನುಗ್ಗಿದ್ದು, ಪರಿಹಾರಕ್ಕಾಗಿ ಸಂಕಷ್ಟದಲ್ಲಿರುವ ರೈತರು ಆಗ್ರಹಿಸಿದ್ದಾರೆ.

ಕೂಡ್ಲಿಗಿ ಕ್ಷೇತ್ರದ 74 ಕೆರೆಗಳನ್ನು ತುಂಬಿಸುವ ಯೋಜನೆಯ ಭಾಗವಾಗಿ ಅಳವಡಿಸಲಾಗಿದ್ದ ನೀರಾವರಿ ಪೈಪ್‌ಲೈನ್, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಿಪ್ಪಾಪುರ ಗ್ರಾಮದ ಬಳಿ ಇದ್ದಕ್ಕಿದ್ದಂತೆ ಒಡೆದು ಅವಾಂತರ ಸೃಷ್ಟಿಸಿದೆ. ಪೈಪ್‌ಲೈನ್ ಸೋರಿಕೆಯಿಂದಾಗಿ ನೀರು ಮುಗಿಲೆತ್ತರಕ್ಕೆ ಚಿಮ್ಮಿದ್ದು, ಅತ್ಯಂತ ರಭಸದಿಂದ ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿದೆ. ಮಳೆಯ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ಈರುಳ್ಳಿ, ಮೆಕ್ಕೆಜೋಳ, ಕಬ್ಬು ಸೇರಿದಂತೆ 10 ಎಕರೆಗೂ ಹೆಚ್ಚು ವಿಸ್ತೀರ್ಣದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಕೊಚ್ಚಿಹೋಗಿವೆ. ಅಲ್ಲದೆ ನೂರಾರು ಅಡಿಕೆ ಹಾಗೂ 20ಕ್ಕೂ ಹೆಚ್ಚು ತೆಂಗಿನ ಗಿಡಗಳು ನೆಲಸಮವಾಗಿವೆ. ಕಾಮಗಾರಿಯ ಕಳಪೆ ಗುಣಮಟ್ಟವೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ಹೊರಹಾಕಿರುವ ರೈತರು, ಘಟನೆ ನಡೆದು ಇಷ್ಟೆಲ್ಲಾ ಹಾನಿಯಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.
