ವಿಜಯನಗರ : ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಹಿರಿಯ ನಾಯಕರು, ಅವರು ಹೇಳಿಕೆ ಕೊಟ್ಟಿದ್ದಾರೆ ಅಂದ್ರೆ ಅದರಲ್ಲಿ ಉದ್ದೇಶ ಇರುತ್ತದೆ, ಹಾಗೆಲ್ಲ ಸುಮ್ನೆ ಹೇಳಿಕೆ ಕೊಡೋರು ಅಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತ ಸಮುದಾಯ ಕಡೆಗಣನೆ ಮಾಡಲಾಗ್ತಿದೆ ಎಂಬ ಶಿವಶಂಕರಪ್ಪನವ್ರ ಹೇಳಿಕೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗುತ್ತದೆ, ಈ ವಿಚಾರ ಕುರಿತಾಗಿ ನೀವು ಕಾಂಗ್ರೆಸ್ ನವರನ್ನು ಕೇಳಿ, ನಾನು ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಏನನ್ನು ಹೇಳೋದಿಲ್ಲ ಎಂದರು.
ಶಾಮನೂರು ಶಿವಶಂಕರಪ್ಪನವರು ಸತ್ಯಾಸತ್ಯತೆ ಬಗ್ಗೆ ಮಾತನಾಡುತ್ತಾರೆ, ಯಾವಾಗಲೂ ಸತ್ಯದ ಪರ ಧ್ವನಿ ಎತ್ತುತ್ತಾರೆ , ಹೀಗಾಗಿ ಕಾಂಗ್ರೆಸ್ ನಲ್ಲಿ ಏನಾಗುತ್ತೆ ಅನ್ನೊದನ್ನ ನಾನು ಚರ್ಚೆ ಮಾಡೋದಿಲ್ಲ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಾರೆ ಎಂದು ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಸತ್ಯ ಹೇಳಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ ನೀಡಿದ್ದರು. ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ಕೊಟ್ಟಿಲ್ಲ. ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ ಎಂದು ಕಿಡಿಕಾರಿದ್ದು, ಇದರ ಬಗ್ಗೆ ನಾನು ಯಾವುದೇ ಮಂತ್ರಿಗಳ ಬಳಿ ಹೇಳಲು ಹೋಗಿಲ್ಲ ಎಂದರು.
ಲಿಂಗಾಯತ ಸಿಎಂ ವಿಚಾರವಾಗಿ ಮಾತನಾಡಿದ ಅವರು, ಲಿಂಗಾಯತ ಸಿಎಂ ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಇದ್ರು, ಆಗ ಎಲ್ರೂ ಚೆನ್ನಾಗಿ ಇದ್ರು, ಈಗ ನಮ್ಮವರೆಲ್ಲ ಕಂಗಾಲಾಗಿದ್ದಾರೆ. ವೀರಶೈವ ಲಿಂಗಾಯತ ಶಾಸಕರಿಗೆ ಸ್ಥಾನ ಮಾನ ಸಿಗದೇ ಇರೋದು ಬೇರೇ ವಿಚಾರ ಎಂದಿದ್ದರು.
