Belagavi

ನೀಟ್ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ ತೀವ್ರ ಪ್ರತಿಭಟನೆ

Share

ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಬೆಳಗಾವಿಯಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ದೆಹಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಯೂತ್ ಕಾಂಗ್ರೆಸ್ ಹಾಗೂ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಇಂದು ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ದೇಶಾದ್ಯಂತ NEET ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಖಂಡಿಸಿ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಬೆಳಗಾವಿಯಲ್ಲೂ ಬೃಹತ್ ಪ್ರತಿಭಟನೆ ನಡೆಯಿತು. ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಯೂತ್ ಕಾಂಗ್ರೆಸ್ ಮುಖಂಡ ಅಮಾನ್ ಸೇಠ್ ನೇತೃತ್ವದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ನ್ಯಾಯ ಸಿಗಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕೆಂದು ಈ ವೇಳೆ ಒತ್ತಾಯಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು, ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಹಾಗೂ ಇತ್ತೀಚಿನ ದಿನಗಳಲ್ಲಿ 70ಕ್ಕೂ ಹೆಚ್ಚು ಬಾರಿ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು. ಲಕ್ಷಾಂತರ ಯುವಜನತೆಯ ಭವಿಷ್ಯದ ಜೊತೆ ಸರ್ಕಾರ ಆಟವಾಡುತ್ತಿದೆ ಎಂದು ಕಿಡಿಕಾರಿದರು.
ಇನ್ನು ಪರೀಕ್ಷೆ ರದ್ದು ಮಾಡಿ ಮತ್ತೆ ಬರೆಯಲು ವಿದ್ಯಾರ್ಥಿಗಳನ್ನು ಒತ್ತಾಯಿಸುವ ಮಾದರಿಯಲ್ಲೇ, ಅಕ್ರಮ ಎಸಗಿದ ಜನಪ್ರತಿನಿಧಿಗಳಿಗೂ ಮರುಚುನಾವಣೆ ನಡೆಸಬೇಕೆಂದು ಆಗ್ರಹಿಸಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಹಾಗೂ ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಪಟ್ಟುಹಿಡಿದರು.

ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೋಷಕರು ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಬಡವರು, ರೈತರು ಹಾಗೂ ಶ್ರಮಿಕ ವರ್ಗದವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ರಕ್ತ ನೀರು ಮಾಡಿ ಹಣ ವ್ಯಯಿಸಿರುತ್ತಾರೆ. ಆದರೆ ವ್ಯವಸ್ಥೆಯ ಲೋಪದಿಂದ ಸತತವಾಗಿ ನಡೆಯುತ್ತಿರುವ ಅಕ್ರಮಗಳು ಮಕ್ಕಳ ಜೀವ ತಳೆಯುತ್ತಿರುವುದು ಕಳವಳಕಾರಿಯಾಗಿದೆ ಎಂದರು. ಇದೇ ವೇಳೆ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡುತ್ತಿರುವುದನ್ನು ಖಂಡಿಸಿದ ಪೋಷಕರು, ಸರ್ಕಾರ ತಕ್ಷಣವೇ ತನ್ನ ಹೊಣೆಗಾರಿಕೆಯನ್ನು ಅರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಯೂತ್ ಕಾಂಗ್ರೆಸ್ ಮುಖಂಡ ಅಮನ್ ಸೇಠ್ ಮಾತನಾಡಿ, 12-14 ವರ್ಷಗಳಿಂದ ವೈದ್ಯರಾಗುವ ಕನಸು ಹೊತ್ತು ಕಠಿಣ ಸನ್ನಿವೇಶಗಳ ಮಧ್ಯೆ ಅಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ವ್ಯವಸ್ಥೆಯ ತಪ್ಪಿನಿಂದ ಅನ್ಯಾಯವಾಗುತ್ತಿದೆ ಎಂದರು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ NTA ಸಂಸ್ಥೆಯಲ್ಲಿ ಕೇವಲ 22 ಖಾಯಂ ಸರ್ಕಾರಿ ನೌಕರರಿದ್ದು, ಉಳಿದವರೆಲ್ಲರೂ ಹೊರಗುತ್ತಿಗೆ ನೌಕರರಾಗಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಬಿಚ್ಚಿಟ್ಟರು. ಈ ಹೋರಾಟ ಯಾವುದೇ ರಾಜಕೀಯ ಪ್ರೇರಿತವಲ್ಲ, ಕೇವಲ ಯುವಜನತೆಯ ಹಕ್ಕು ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಧ್ವನಿ ಎಂದು ಸ್ಪಷ್ಟಪಡಿಸಿದರು.

Tags:

error: Content is protected !!