ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯನ್ನು ರದ್ದುಗೊಳಿಸಬೇಕು ಹಾಗೂ ಪರೀಕ್ಷಾ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯದ ನೇತೃತ್ವದಲ್ಲಿ ಗುರುವಾರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.


ಪಟ್ಟಣದ ಕಿತ್ತೂರ ಚನ್ನಮ್ಮ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ನೂರಾರು ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರ್ಕಾರದ ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ವಿಶ್ವಾಸ ಮತ್ತು ಪಾರದರ್ಶಕತೆ ಕಾಪಾಡುವಲ್ಲಿ ಎನ್ಟಿಎ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ಶೈಕ್ಷಣಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಸವಸೈನ್ಯ ಸಂಪೂರ್ಣ ಬೆಂಬಲ ನೀಡಲಿದೆ. ಎನ್ಟಿಎಯನ್ನು ರದ್ದುಗೊಳಿಸಿ ಪಾರದರ್ಶಕ ಹೊಸ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯ ಬಳಿಕ ಶಿರಸ್ತೇಧಾರ ರಾಜು ಹಾದಿಮನಿ ಅವರಿಗೆ ವಿದ್ಯಾರ್ಥಿನಿ ಕುಮಾರಿ ರೇಣುಕಾ ಹಟ್ಟಿ ಅವರು ಓದಿ ನೀಡಿದರು
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ನ್ಯಾಯವಾದಿ ರವಿ ರಾಠೋಡ, ಚಂದ್ರಶೇಖರಗೌಡ ಪಾಟೀಲ, ಪ್ರಶಾಂತ ಮುಂಜಾನೆ, ಜಟ್ಟಿಂಗರಾಯ ಮಾಲಗಾರ, ಭದ್ರಣ್ಣ ಮಣ್ಣೂರ, ಪ್ರವೀಣ ಪೂಜಾರಿ, ಆನಂದ ವನರೊಟ್ಟಿ, ಸಂಗಮೇಶ ಜಾಲಗೇರಿ, ದ್ಯಾವನಗೌಡ ಪಾಟೀಲ (ದೇಗಿನಾಳ), ಬಸವರಾಜ ಲಮಾಣಿ, ರೇಣುಕಾ ಹಟ್ಟಿ, ಸಾನಿಯಾ ನದಾಫ್, ಸಂಜನಾ ಪಾಟೀಲ್, ಐಶ್ವರ್ಯ ಬಡಿಗೇರ್, ಲಕ್ಷ್ಮಿ ಜಾಲಗೇರಿ ಸೇರಿದಂತೆ ರಾಷ್ಟ್ರೀಯ ಬಸವಸೈನ್ಯದ ಪದಾಧಿಕಾರಿಗಳು, ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
