Vijaypura

ಪ್ರಿಯಕರನಿಗಾಗಿ ಗಂಡನ ಕೊಲೆ? ಎರಡು ತಿಂಗಳ ಬಳಿಕ ಚಾಟಿಂಗ್‌ನಿಂದ ಬಯಲಾಯ್ತು ಕೊಲೆ ರಹಸ್ಯ

Share

ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಬಿಸಲಾಗಿದ್ದ ವ್ಯಕ್ತಿಯ ಸಾವಿನ ಹಿಂದೆ ಭೀಕರ ಕೊಲೆ ಸಂಚು ಅಡಗಿತ್ತು ಎಂಬ ಆರೋಪ ಇದೀಗ ಬೆಳಕಿಗೆ ಬಂದಿದೆ. ಗಂಡನ ಸಾವನ್ನು ಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿ, ಎರಡು ತಿಂಗಳ ಬಳಿಕ ಪೊಲೀಸರ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಪ್ರಿಯಕರ ನೊಂದಿಗೆ ನಡೆಸಿದ್ದ ಚಾಟಿಂಗ್‌ ಕೊಲೆ ರಹಸ್ಯವನ್ನು ಬಯಲು ಮಾಡಿದೆ. ಈ ಕುರಿತು ಇಲ್ಲಿದೆ ಒಂದು ವರದಿ…

ಹೌದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ನಿವಾಸಿ ಅರುಣ್ ಬಡಿಗೇರೆ ಅವರು ಮೇ 5ರಂದು ಮೃತಪಟ್ಟಿದ್ದರು. ಆಗ ಅವರ ಪತ್ನಿ ಭಾಗ್ಯಶ್ರೀ, ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಳು. ಕುಟುಂಬಸ್ಥರು ಮತ್ತು ಸ್ಥಳೀಯರು ಕೂಡ ಅದನ್ನೇ ನಂಬಿದ್ದರು. ಆದರೆ ಪ್ರಕರಣದ ಮರು ತನಿಖೆ ವೇಳೆ ಹಲವು ಅನುಮಾನಗಳು ಮೂಡಿದ್ದು, ಎರಡು ತಿಂಗಳ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತ್ನಿ ಹಾಗೂ ಆಕೆಯ ಪ್ರಿಯಕರನ ನಡುವಿನ ಮೊಬೈಲ್ ಚಾಟಿಂಗ್‌ ಪೊಲೀಸರ ಕೈಗೆ ಸಿಕ್ಕಿದ್ದು, ಕೊಲೆ ಸಂಚಿನ ಬಗ್ಗೆ ಮಹತ್ವದ ಸುಳಿವು ನೀಡಿದೆ ಎನ್ನಲಾಗಿದೆ.

ಇನ್ನೂ ತನಿಖೆ ಪ್ರಕಾರ, ಪ್ರಿಯಕರನ ಸಲಹೆಯಂತೆ ಭಾಗ್ಯಶ್ರೀ ತನ್ನ ಗಂಡನಿಗೆ ಮೊದಲು ನಿದ್ರೆ ಮಾತ್ರೆ ನೀಡಿದ್ದಾಳೆ. ಬಳಿಕ ಅವರು ನಿದ್ರೆಯಲ್ಲಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ನಂತರ ಅದನ್ನು ಹೃದಯಾಘಾತದ ಸಾವು ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ ಎನ್ನಲಾಗಿದೆ. ಪ್ರಿಯಕರನೊಂದಿಗೆ ಮದುವೆಯಾಗುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಇಂಡಿ ಪೊಲೀಸರು ಭಾಗ್ಯಶ್ರೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಕರನ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದ್ದು, ಆತನ ವಿರುದ್ಧವೂ ಕಾನೂನು ಕ್ರಮಕ್ಕೆ ಸಿದ್ಧತೆ ನಡೆದಿದೆ. ಮೊಬೈಲ್ ಚಾಟಿಂಗ್‌, ತಾಂತ್ರಿಕ ಸಾಕ್ಷ್ಯಗಳು ಹಾಗೂ ಇತರೆ ಮಾಹಿತಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ಎರಡು ತಿಂಗಳ ಕಾಲ ಸಹಜ ಸಾವು ಎಂದು ಕಂಡಿದ್ದ ಪ್ರಕರಣ, ಈಗ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದ್ದು, ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಒಟ್ನಲ್ಲಿ ಈ ರೀತಿಯ ಕೊಲೆ ಪ್ರಕರಣಗಳು ಸಮಾಜದಲ್ಲಿ ನೈತಿಕ ಮೌಲ್ಯಗಳ ಕುಸಿತವನ್ನು ಪ್ರತಿಬಿಂಬಿಸುತ್ತವೆ. ಇಂಡಿ ಪೊಲೀಸರು ಈ ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಂಡಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಎಲ್ಲಾ ವಿವರಗಳು ಸ್ಪಷ್ಟವಾಗುವ ಸಾಧ್ಯತೆ ಇದೆ. ಈ ದುರಂತ ಘಟನೆ ಸಮಾಜದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಸ್, ವಿಜಯಪುರ

Tags:

error: Content is protected !!