ಧರ್ಮನಗರಿ ಬಸವನ ಕುಡಚಿಯಲ್ಲಿ ಕಳೆದ ಸೆಪ್ಟೆಂಬರ್ 12 ರಿಂದ 27 ರವರೆಗೆ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಜರುಗಿದ ದಶಲಕ್ಷಣ ಮಹಾಪರ್ವ ಹಾಗೂ ಬೃಹತ್ ಶ್ರೀ ಅರ್ಹತ್ ಚಕ್ರ ವಿಧಾನ ಕಾರ್ಯಕ್ರಮವು ಇಂದು ಕಣ್ಮನ ಸೆಳೆಯುವ ಭವ್ಯ ರಥಯಾತ್ರೆ ಹಾಗೂ ಕ್ಷಮಾವಾಣಿ ಮಹಾಪರ್ವದೊಂದಿಗೆ ಮಂಗಳಕರವಾಗಿ ಸಂಪನ್ನಗೊಂಡಿದೆ. ಪರಮಪೂಜ್ಯ ಮುನಿಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಧಾರ್ಮಿಕ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾಗಿದ್ದಾರೆ.


ಬೆಳಗಾವಿ ಜಿಲ್ಲೆಯ ಧರ್ಮನಗರಿ ಎಂದೇ ಖ್ಯಾತಿ ಪಡೆದಿರುವ ಬಸವನ ಕುಡಚಿಯಲ್ಲಿ ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 27 ರವರೆಗೆ ಜರುಗಿದ ದಶಲಕ್ಷಣ ಮಹಾಪರ್ವ ಮತ್ತು ಬೃಹತ್ ಶ್ರೀ ಅರ್ಹತ್ ಚಕ್ರ ವಿಧಾನ ಕಾರ್ಯಕ್ರಮವು ಪರಮಪೂಜ್ಯ ಚರ್ಯಾ ಶಿರೋಮಣಿ ಮುನಿಶ್ರೀ 108 ವಿದಿತ ಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಪ್ರತಿಷ್ಠಾಚಾರ್ಯ ಶ್ರೀ ಮಾಣಿಕ ಶ್ರೀ ಪಾಲ ಚಂದಗಡೆ ಹಾಗೂ ಪ್ರತಿಮಾಧಾರಿ ಜಯಕುಮಾರ್ ಭಯ್ಯಾಜಿ ಅವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನೆರವೇರಿತು. ಈ ಧಾರ್ಮಿಕ ಆಚರಣೆಗಳ ಮುಕ್ತಾಯದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕ್ಷಮಾವಾಣಿ ನಿಮಿತ್ತದ ಬೃಹತ್ ರಥಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜೈನ ಧರ್ಮೀಯರು ಭಾಗಿ1 ಯಾಗಿ ಸಾತಿಶಯ ಪುಣ್ಯ ಸಂಪಾದಿಸಿಕೊಂಡರು. ಈ ಅದ್ಧೂರಿ ರಥಯಾತ್ರೆ ಹಾಗೂ ಸಮಾರೋಪ ಸಮಾರಂಭವನ್ನು ಪರಮ ಪೂಜ್ಯ ಮುನಿಶ್ರೀ 108 ವಿದಿತಸಾಗರ ಮಹಾರಾಜರ ಚಾತುರ್ಮಾಸ ಕಮೀಟಿ, ಸುಖಶಾಂತಿ ಯುವಕ ಸಂಘ ಹಾಗೂ ಆದರ್ಶ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಪರಸ್ಪರ ಕ್ಷಮೆ ಕೋರಿ, ಕ್ಷಮಾವಾಣಿ ಮಹಾಪರ್ವದ ಮಹತ್ವವನ್ನು ಸಾರಿದರು. ಮುನಿಶ್ರೀಗಳ ದಿವ್ಯ ವಾಣಿ ಹಾಗೂ ಸತ್ಸಂಗದಿಂದ ಇಡೀ ಧರ್ಮನಗರಿಯಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಾತಾವರಣ ಕಳೆಗಟ್ಟಿತ್ತು.

