ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಬರ ಹಾಗೂ ಬಿಸಿಲಿನ ಬೇಗೆಗೆ ಈರುಳ್ಳಿ ಬೆಳೆ ಸಂಪೂರ್ಣವಾಗಿ ಕುಸಿದಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎಕರೆಗೆ ಕನಿಷ್ಠ ಇಳುವರಿಯೂ ಸಿಗದೆ ಮತ್ತು ಮಾರುಕಟ್ಟೆಯಲ್ಲಿ ಬೆಳೆಯೂ ಕೊಳೆತು ಹೋಗುತ್ತಿರುವುದರಿಂದ ಅನ್ನದಾತರು ಸಾಲದ ಶೂಲಕ್ಕೆ ಸಿಲುಕಿದ್ದು, ಸರ್ಕಾರದ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ಬರಗಾಲದ ಭೀಕರತೆ ಹಾಗೂ ಬಿಸಿಲಿನ ತಾಪದ ಮಧ್ಯೆಯೂ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಕೊಳವೆಬಾವಿ ನೀರು ಹಾಗೂ ರೈನ್‌ಪೈಪ್ ಹನಿ ನೀರಾವರಿ ಪದ್ಧತಿ ಬಳಸಿ ರೈತರು ಕಷ್ಟಪಟ್ಟು ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ. ಎಕರೆಗೆ 50 ಕ್ವಿಂಟಲ್ ಇಳುವರಿಯೂ ಸಿಗದೆ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿ ನಿರಂತರ ನಷ್ಟ ಅನುಭವಿಸುತ್ತಿರುವ ಅನ್ನದಾತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಕೊಳೆತು ದುರ್ವಾಸನೆ ಬೀರುತ್ತಿದ್ದರೂ ಹಾಗೂ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ರೈತರ ಆರ್ಥಿಕ ಸಂಕಷ್ಟ ಮಾತ್ರ ತಪ್ಪಿಲ್ಲವಾಗಿದ್ದು, ಕೂಡಲೇ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸ್ಪಂದಿಸಿ ಸೂಕ್ತ ಬೆಂಬಲ ಬೆಲೆ ಒದಗಿಸುವಂತೆ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಉತ್ತಂಗಿ ಒತ್ತಾಯಿಸಿದ್ದಾರೆ.
