ಖದೀಮರು ಸಿನಿಮಾ ಸ್ಟೈಲ್ನಲ್ಲಿ ಅಕ್ರಮ ಮದ್ಯ ಸಾಗಾಟಕ್ಕೆ ಮುಂದಾಗಿ ಅಬಕಾರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೊರಗಡೆ ಮೀನು ಮತ್ತು ಐಸ್ ತುಂಬಿದ್ದ ಟ್ರೇ ಇಟ್ಟು, ಒಳಗಡೆ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯ ಸಾಗಿಸುತ್ತಿದ್ದ ಜಾಲವನ್ನು ಬೆಳಗಾವಿಯ ಅಬಕಾರಿ ಇಲಾಖೆ ಭೇದಿಸಿದೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ಬೆಳಗಾವಿಯ ಬಾಚಿ ರಸ್ತೆಯ ವೈಭವ ಹೋಟೆಲ್ ಸಮೀಪ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಉಡುಪಿಯಲ್ಲಿ ನೋಂದಣಿಯಾಗಿದ್ದ ‘ಒಶಿಯನ್ ಫಿಶರ್’ ಹೆಸರಿನ ಕೋಲ್ಡ್ ಸ್ಟೋರೇಜ್ ವಾಹನದಲ್ಲಿ ಮೀನು ಹಾಗೂ ಐಸ್ ಸಾಗಾಟದ ಸೋಗಿನಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪನಿರೀಕ್ಷಕ ಸುನಿಲ್ ಪಾಟೀಲ್ ಮತ್ತು ತಂಡ ದಾಳಿ ನಡೆಸಿದ್ದು, ಪೊಲೀಸರನ್ನು ಕಂಡ ತಕ್ಷಣ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ವಾಹನದಲ್ಲಿದ್ದ ಮೀನಿನ ಟ್ರೇಗಳನ್ನು ಸರಿಸಿ ಪರಿಶೀಲಿಸಿದಾಗ ಒಳಭಾಗದಲ್ಲಿ ‘ಮಾಲ್ಟ್ ವಿಸ್ಕಿ’ ಎಂದು ಬರೆದಿದ್ದ 350 ರಟ್ಟಿನ ಪೆಟ್ಟಿಗೆಗಳು ಪತ್ತೆಯಾಗಿವೆ. ಇದರಲ್ಲಿ 180 ಎಂಎಲ್ ಅಳತೆಯ ‘ಬಿಗ್ ಬಾಸ್’ ಬ್ರಾಂಡಿ ಬಾಟಲಿಗಳಿದ್ದು, ಜಪ್ತಿಯಾದ ಮದ್ಯದ ಮೌಲ್ಯ ₹35.28 ಲಕ್ಷ ಹಾಗೂ ವಾಹನದ ಮೌಲ್ಯ ₹20 ಲಕ್ಷ ಸೇರಿ ಒಟ್ಟು ₹55 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ್ ತಿಳಿಸಿದ್ದಾರೆ. ಬಾಟಲಿಗಳ ಮೇಲೆ ತಯಾರಾದ ನಿಖರ ವಿಳಾಸವಿಲ್ಲದ ಕಾರಣ, ಈ ವ್ಯವಸ್ಥಿತ ಜಾಲದ ಮೂಲ ಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ.

ಇದೇ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಡಾ. ಮಂಜುನಾಥ್, ಅಕ್ರಮವಾಗಿ ಬರುವ ಹೊರರಾಜ್ಯದ ಮದ್ಯಕ್ಕೆ ಯಾವುದೇ ರಾಸಾಯನಿಕ ಗುಣಮಟ್ಟದ ಪರೀಕ್ಷೆ ಇರುವುದಿಲ್ಲ. ಆದ್ದರಿಂದ ಕಡಿಮೆ ಬೆಲೆಗೆ ಸಿಗುತ್ತದೆ ಅಥವಾ ಡ್ಯೂಟಿ ಫ್ರೀ ಮದ್ಯವೆಂದು ನಂಬಿ ಇಂತಹ ಮದ್ಯ ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಬೆಳಗಾವಿ ಸುತ್ತಮುತ್ತಲಿನ ಗಡಿ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಮತ್ತು ಹೊಸ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
