VIJAYANAGAR

ವಿಜಯನಗರದ ಹೆದ್ದಾರಿಯಲ್ಲಿ ವನ್ಯಜೀವಿಗಳ ಮಾರಣಹೋಮ

Share

ಕಾಡು ಪ್ರಾಣಿಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎನ್ನುವ ಸಂಕಲ್ಪ ಒಂದೆಡೆಯಾದರೆ, ಮತ್ತೊಂದೆಡೆ ವಾಹನ ಸವಾರರ ಅತಿವೇಗಕ್ಕೆ ವನ್ಯಜೀವಿಗಳು ಅನ್ಯಾಯವಾಗಿ ಬಲಿಯಾಗುತ್ತಿವೆ. ವಿಜಯನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಕರಡಿ ಮತ್ತು ಚಿರತೆಗಳ ಸರಣಿ ಸಾವು ಸಂಭವಿಸುತ್ತಿದ್ದು, ವನ್ಯಜೀವಿ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ವಿಜಯನಗರ ಜಿಲ್ಲೆಯ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-50 ಈಗ ವನ್ಯಜೀವಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ಹಾಗೂ ವಾಹನ ಸವಾರರ ಅತಿವೇಗಕ್ಕೆ ಮನುಷ್ಯರಷ್ಟೇ ಅಲ್ಲದೆ, ಮೂಕ ಪ್ರಾಣಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿವೆ. ಪ್ರಸಕ್ತ ವರ್ಷದಲ್ಲಿಯೇ ಈ ಭಾಗದಲ್ಲಿ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಮೂರು ಚಿರತೆಗಳು ಹಾಗೂ ಒಂದು ಕರಡಿ ದಾರುಣವಾಗಿ ಸಾವನ್ನಪ್ಪಿವೆ. ವನ್ಯಜೀವಿಗಳ ಚಲನವಲನವಿರುವ ಪ್ರದೇಶವೆಂದು ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ ಸಹ, ವಾಹನ ಸವಾರರು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ಸರಣಿ ಅಪಘಾತಗಳು ಮರುಕಳಿಸುತ್ತಿವೆ.

ವಿಶೇಷವಾಗಿ ಬೆಳಗಿನ ಜಾವ ಆಹಾರ ಮತ್ತು ನೀರು ಅರಸಿ ಕಾಡು ಪ್ರಾಣಿಗಳು ಹೆದ್ದಾರಿ ದಾಟುವ ವೇಳೆ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಬಲಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ವನ್ಯಜೀವಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ಮೇಲ್ಸೇತುವೆ (ಓವರ್‌ಪಾಸ್) ಅಥವಾ ಅಂಡರ್‌ಪಾಸ್ ಶೆಲ್ಟರ್‌ಗಳನ್ನು ನಿರ್ಮಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಅಲ್ಲದೆ, ಅರಣ್ಯದಂಚಿನ ರಸ್ತೆಗಳಲ್ಲಿ ಚಲಿಸುವಾಗ ವಾಹನ ಸವಾರರು ಕಡ್ಡಾಯವಾಗಿ ವೇಗಕ್ಕೆ ಕಡಿವಾಣ ಹಾಕಿ, ಮುಂದಿನ ಪೀಳಿಗೆಗಾಗಿ ವನ್ಯಸಂಪತ್ತನ್ನು ಉಳಿಸಲು ಸಹಕರಿಸಬೇಕು ಎಂದು ವಿಜಯನಗರ ಡಿ.ಸಿ.ಎಫ್ ಅನುಪಮಾ ಹೆಚ್. ಅವರು ಕಳಕಳಿಯ ಮನವಿ ಮಾಡಿದ್ದಾರೆ.

Tags:

error: Content is protected !!