ಬಾಗಲಕೋಟೆ ಜಿಲ್ಲೆಯಲ್ಲಿ ಬರ ವೀಕ್ಷಣೆ ನಡೆಸಿದ ನೂತನ ಸಚಿವ ವಿಜಯಾನಂದ ಕಾಶಪ್ಪನವರ, ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ರೈತರಿಗೆ ಬೆಳೆ ವಿಮೆ ನೀಡದ ಬಿಜೆಪಿ ನಾಯಕರು, ಈಗ ಕೇವಲ ರಾಜಕೀಯ ಲಾಭಕ್ಕಾಗಿ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.


ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹೆರೂರು ಹಾಗೂ ಅಮರಾವತಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ಅವರು ಖುದ್ದಾಗಿ ಭೇಟಿ ನೀಡಿ ಬರ ಪರಿಸ್ಠಿತಿಯ ವೀಕ್ಷಣೆ ನಡೆಸಿದರು. ಕಂಗೆಟ್ಟಿರುವ ಹೆಸರು ಹಾಗೂ ತೊಗರಿ ಬೆಳೆ ಹಾನಿಯನ್ನು ಪರಿಶೀಲಿಸಿದ ಸಚಿವರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು (JDA) ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಇಳಕಲ್, ಗುಳೇದಗುಡ್ಡ ಹಾಗೂ ಬಾಗಲಕೋಟೆ ಭಾಗದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಮುಂಬರುವ ಮೂರು ದಿನಗಳಲ್ಲಿ ಸರ್ಕಾರಕ್ಕೆ ಬರ ಕುರಿತಾದ ಸಂಪೂರ್ಣ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸವನ್ನು ತೀವ್ರವಾಗಿ ಖಂಡಿಸಿದ ಸಚಿವರು, 2018ರಿಂದ 2023ರವರೆಗಿನ ತಮ್ಮ ಆಡಳಿತಾವಧಿಯಲ್ಲಿ ಬಿಜೆಪಿಯವರು ರೈತರಿಗೆ ಸೂಕ್ತ ಬೆಳೆ ವಿಮೆ ನೀಡಿಲ್ಲ. ಬಿ.ವೈ. ವಿಜಯೇಂದ್ರ ಹಾಗೂ ಅವರ ತಂಡ ರಾಜ್ಯಾದ್ಯಂತ ಸುತ್ತಾಡುತ್ತಾ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ಬೆಳೆ ವಿಮೆ ಪರಿಹಾರ ನೀಡಬೇಕಿದ್ದು, ಜಿಲ್ಲೆಯ 60,713 ರೈತರಿಗೆ ಪರಿಹಾರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಇದೇ ವೇಳೆ ತಮ್ಮ ಖಾತೆ ಹಂಚಿಕೆ ವಿಚಾರದ ಕುರಿತು ಮಾತನಾಡಿ, ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು, ಆದರೆ ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೊಂದುವ ಖಾತೆ ನೀಡುವಂತೆ ಕೋರಿರುವುದಾಗಿ ಸ್ಪಷ್ಟಪಡಿಸಿದರು.
