Bellari

ಬಳ್ಳಾರಿಯಲ್ಲಿ ತ್ರಿಕೋನ ಪ್ರೇಮ ದುರಂತ: ಮಾಜಿ ಪ್ರೇಮಿಯ ಕಿರುಕುಳ

Share

ಬಳ್ಳಾರಿಯಲ್ಲಿ ತ್ರಿಕೋನ ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿದ್ದು, ಹಳೆಯ ಪ್ರೇಮಿಯ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಐಟಿ ಉದ್ಯೋಗಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸೂಸೈಡ್ ಮಾಡಿಕೊಳ್ಳುವ ಮುನ್ನ ಲೈವ್ ವಿಡಿಯೋ ಹಂಚಿಕೊಂಡಿರುವ ಯುವತಿ, ತನಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ್ದಾಳೆ. ಈ ಕುರಿತು ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಮಾಜಿ ಪ್ರೇಮಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಮನನೊಂದ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿ, ಬಳ್ಳಾರಿಯ ಕೌಲಬಜಾರ್ ಮೂಲದ ಫೀರ್ದೋಸ್ ಎಂಬ ಯುವತಿ ಸಿನಿಮೀಯ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಕೌಲಬಜಾರ್ ಏರಿಯಾದ ಅಜೀಂ ಎಂಬಾತನನ್ನು ಪ್ರೀತಿಸುತ್ತಿದ್ದ ಫೀರ್ದೋಸ್, ಆತನ ನಡವಳಿಕೆಯಿಂದ ಬೇಸತ್ತು ದೂರವಾಗಿದ್ದರು. ಬಳಿಕ ಅಜೀಂ ಸ್ನೇಹಿತ ಸೋಹೈಲ್ ಜೊತೆಗೆ ಪ್ರೀತಿಯಲ್ಲಿ ಬಿದ್ದು, ಆತನನ್ನೇ ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ, ಈ ವಿಷಯ ತಿಳಿಯುತ್ತಿದ್ದಂತೆ ಮೊದಲ ಪ್ರೇಮಿ ಅಜೀಂ, ತನ್ನ ಬಳಿಯಿದ್ದ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಲಾರಂಭಿಸಿದ್ದನು.

ಇಬ್ಬರೂ ಪ್ರೇಮಿಗಳ ಕಿರುಕುಳದಿಂದ ದಿಕ್ಕುತೋಚದಂತಾದ ಯುವತಿ, ಆತ್ಮಹತ್ಯೆಗೂ ಮುನ್ನ ಹೊಸ ಪ್ರೇಮಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಲೈವ್ ವಿಡಿಯೋ ಮಾಡಿ, ‘ತನ್ನ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆಯಾಗಲಿ, ತನಗೆ ನ್ಯಾಯ ಸಿಗಲಿ’ ಎಂದು ಮನವಿ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಪ್ರೇಮಿಗಳ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಮೃತರ ತಾಯಿ ಅಂಬ್ರೀನ್ ಭಾನು ಕೌಲಬಜಾರ್ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಪರಾರಿಯಾಗಿರುವ ಇಬ್ಬರೂ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Tags:

error: Content is protected !!