Ballari

ಪತ್ನಿ, ಮಗುವನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಗಂಡ ಅರೆಸ್ಟ್!

Share

ಬಳ್ಳಾರಿಯ ಅಂದ್ರಾಳು ಏರಿಯಾದಲ್ಲಿ ಶೀಲ ಶಂಕಿಸಿ ಪತ್ನಿ ಹಾಗೂ ಏಳು ತಿಂಗಳ ಹಸುಗೂಸನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ ಕ್ರೂರಿ ಪತಿಯನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಮ್ಸ್ ಆಸ್ಪತ್ರೆಯ ಶವಾಗಾರದ ಬಳಿ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ.

ಬಳ್ಳಾರಿಯ ಅಂದ್ರಾಳು ಏರಿಯಾದಲ್ಲಿ ನಡೆದಿರುವ ಈ ಭೀಕರ ದ್ವಿಪತ್ನಿ-ಮಗು ಕೊಲೆ ಪ್ರಕರಣ ನಗರವನ್ನೇ ಬೆಚ್ಚಿಬೀಳಿಸಿದೆ. ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ರಾಜೇಶ್ವರಿ (25) ಹಾಗೂ ಆಕೆಯ ಏಳು ತಿಂಗಳ ಮಗು ಅಶ್ವಿನಿಯನ್ನು, ಪತಿ ಹೊನ್ನೂರಸ್ವಾಮಿ ರಾತ್ರಿ ಮಲಗಿದ್ದ ವೇಳೆಯಲ್ಲಿ ದೊಡ್ಡ ಸುತ್ತಿಗೆಯಿಂದ ತಲೆಗೆ ಮನಬಂದಂತೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದ. ಪತ್ನಿಯ ಶೀಲ ಶಂಕಿಸಿ ಹಾಗೂ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಈತ, ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಬಳ್ಳಾರಿ ಎಪಿಎಂಸಿ ಠಾಣೆ ಪೊಲೀಸರು, ಕೊಲೆ ಆರೋಪಿ ಹೊನ್ನೂರಸ್ವಾಮಿಯ ಹೆಡೆಮುರಿಕಟ್ಟಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇನ್ನೊಂದೆಡೆ ವಿಮ್ಸ್ ಆಸ್ಪತ್ರೆಯ ಶವಾಗಾರದ ಮುಂದೆ ಮೃತ ರಾಜೇಶ್ವರಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆಯಾದಾಗಿನಿಂದಲೂ ವರದಕ್ಷಿಣೆಗಾಗಿ ಹಾಗೂ ಅನುಮಾನಪಟ್ಟು ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರೂ, ಗಂಡ ಬೇಕೆಂದು ರಾಜೇಶ್ವರಿ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಆದರೆ, ಹಸುಗೂಸು ಎನ್ನದೆ ಕ್ರೂರವಾಗಿ ಕೊಲೆ ಮಾಡಲಾಗಿದ್ದು, ಈ ಕೃತ್ಯದಲ್ಲಿ ಹೊನ್ನೂರಸ್ವಾಮಿಯ ತಾಯಿಯ ಪಾತ್ರವೂ ಇದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅದೃಷ್ಟವಶಾತ್ ಇನ್ನಿಬ್ಬರು ಮಕ್ಕಳು ಬೇರೆ ಮನೆಯಲ್ಲಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘೋರ ಕೃತ್ಯ ಎಸಗಿದ ಆರೋಪಿಯನ್ನು ಯಾವುದೇ ಕಾರಣಕ್ಕೂ ಹೊರಬರದಂತೆ ಕಠಿಣವಾಗಿ ಶಿಕ್ಷಿಸಬೇಕೆಂದು ಮೃತಳ ಸಂಬಂಧಿಕರು ಕಣ್ಣೀರಿಡುತ್ತಾ ಒತ್ತಾಯಿಸಿದ್ದಾರೆ.

Tags:

error: Content is protected !!