ಉಗಾರ್ ಸಕ್ಕರೆ ಕಾರ್ಖಾನೆಯ ವಿರುದ್ಧ ಪರಿಸರ ಮಾಲಿನ್ಯದ ಸುಳ್ಳು ಆರೋಪಗಳನ್ನು ಮಾಡಿ ಕಾರ್ಖಾನೆಯನ್ನು ಮುಚ್ಚಿಸಲು ಯತ್ನಿಸುತ್ತಿರುವುದನ್ನು ಖಂಡಿಸಿ, ಸಾವಿರಾರು ಕಾರ್ಮಿಕರು ಹಾಗೂ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದಿಂದ ಕಾರ್ಖಾನೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಆಗ್ರಹಿಸಿ ಕಾಗವಾಡ ತಹಸೀಲ್ದಾರ್ ರವೀಂದ್ರ ಹದಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


ಬುಧವಾರ ಸಂಜೆ ಉಗಾರ್ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕಲ್ಲಪ್ಪಾ ಕರಿಗಾರ, ಉಪಾಧ್ಯಕ್ಷ ಶ್ರಾವಣ ಕಾಂಬಳೆ, ಕಾರ್ಯದರ್ಶಿ ಅನಿಲ್ ನವಿಲಗೆರ್, ಸಾಗರ್ ಪೂಜಾರಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಹಾಗೂ ಹಿರಿಯ ಕಾರ್ಮಿಕರು ಕಾರ್ಖಾನೆಯ ಮುಖ್ಯ ಗೇಟ್ ಬಳಿ ಸಮಾವೇಶಗೊಂಡರು. ಅಲ್ಲಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ರಾಣಿ ಚೆನ್ನಮ್ಮ ವೃತ್ತದವರೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಸ್ವಾರ್ಥಕ್ಕಾಗಿ ರಾಜ್ಯ ಹಾಗೂ ಕೇಂದ್ರದ ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅನಾವಶ್ಯಕ ದೂರು ನೀಡಿ ಕಾರ್ಖಾನೆಯನ್ನು ತೊಂದರೆಗೆ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಈ ಕಾರ್ಖಾನೆ ಪ್ರಾರಂಭವಾಗುವ ಮುನ್ನ ಇದು ಗಿಡಗಂಟಿಗಳಿಂದ ಕೂಡಿದ ಸಣ್ಣ ಹಳ್ಳಿಯಾಗಿತ್ತು. ಕಾರ್ಖಾನೆ ಸ್ಥಾಪನೆಯಾದ ನಂತರವೇ ಜನರ ದಟ್ಟಣೆ ಹೆಚ್ಚಿ, ಅಭಿವೃದ್ಧಿಯಾಯಿತು. ಆದರೆ ಈಗ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಮಾಲಿನ್ಯದ ಸುಳ್ಳು ನೆಪವೊಡ್ಡಿ ದೂರು ನೀಡುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆಯ ಮುಖಂಡರು ದೂರಿದರು.
ಈ ಸಕ್ಕರೆ ಕಾರ್ಖಾನೆಯಲ್ಲಿ 5,000ಕ್ಕೂ ಹೆಚ್ಚು ಜನರು ಉದ್ಯೋಗ ಮಾಡುತ್ತಿದ್ದು, ಸಾವಿರಾರು ರೈತರು ಕಬ್ಬು ಪೂರೈಸಿ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳಿಂದ ಇಲ್ಲಿದ್ದ ಜನ ಹಾಗೂ ರೈತರ ಮಧ್ಯೆ ಯಾವುದೇ ವಿವಾದಗಳಿರಲಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಮಾಲಿನ್ಯದ ವಿಷಯವನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಉಗಾರ್ ಪುರಸಭೆಯ ಎಲ್ಲ ಸದಸ್ಯರು ಸಭೆ ನಡೆಸಿ, ಕಾರ್ಖಾನೆಯಿಂದ ಯಾವುದೇ ರೀತಿಯ ಮಾಲಿನ್ಯ ಹಾಗೂ ತೊಂದರೆಯಾಗಿಲ್ಲ ಎಂದು ಗೊತ್ತುವಳಿ ಅಂಗೀಕರಿಸಿ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಹಿರಿಯ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿದ್ದಾರೆ. ಕೆಲವು ವ್ಯಕ್ತಿಗಳು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದಲೇ ಈ ಹುನ್ನಾರ ನಡೆಸುತ್ತಿದ್ದಾರೆ ಎಂದು ದಲಿತ ಮುಖಂಡ ಹಾಗೂ ಪುರಸಭೆ ಸದಸ್ಯ ಅಶೋಕ್ ಕಾಂಬಳೆ ಆರೋಪಿಸಿದರು.
ರೈತ ಮುಖಂಡ ವೀರಭದ್ರ ಕಟಗೇರಿ ಮಾತನಾಡಿ, “ಈ ಸಕ್ಕರೆ ಕಾರ್ಖಾನೆಯು ನಮ್ಮ ಭಾಗದ ಜನರಿಗೆ ಕಾಮಧೇನುವಾಗಿದೆ. ಕಾರ್ಖಾನೆಯನ್ನೇ ನಂಬಿ ಲಕ್ಷಾಂತರ ಕುಟುಂಬಗಳು ಸಂತೋಷದಿಂದ ಜೀವಿಸುತ್ತಿವೆ. ಈ ಕಾರ್ಖಾನೆಯಿಂದ ಯಾರಿಗೂ ತೊಂದರೆಯಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕಾರ್ಖಾನೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ಹುನ್ನಾರ ನಡೆಸಿದ್ದಾರೆ. ನಾವೆಲ್ಲ ರೈತರು ಸಕ್ಕರೆ ಕಾರ್ಖಾನೆಯ ಪರವಾಗಿದ್ದು, ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಘಂಟಾಘೋಷವಾಗಿ ಹೇಳಿದರು.
ಈ ಪ್ರತಿಭಟನಾ ಸಭೆಯಲ್ಲಿ ಮಾಜಿ ಅಧ್ಯಕ್ಷ ವಿಜಯ್ ಯಾದವ್, ಮಹಾದೇವ್ ಉಳ್ಳಾಗಡ್ಡಿ, ನಜೀರ ಟೋಪಿವಾಲೆ, ಅಮುಲ್ ಕಾಮತ, ಶಂಭು ಜೋಶಿ, ಅಪ್ಪಸಾಹೇಬ ವಾಲಿ, ಪುರಸಭೆ ಉಪಾಧ್ಯಕ್ಷ ಸತೀಶ ಜಗತಾಪ, ಸದಸ್ಯರಾದ ಮಹದೇವ ವಡಗಾವೆ, ರಾಜು ಪಾಟೀಲ್, ಪ್ರತಾಪ್ ಜಾತ್ರಾಟಿ, ವಿಕಾಸ್ ಧನಗರ, ರೋಹನ್ ನಾಯಿಕ ಸೇರಿದಂತೆ ಪುರಸಭೆಯ ಇತರ ಸದಸ್ಯರು, ಮಹಿಳಾ ಪ್ರತಿನಿಧಿಗಳು ಹಾಗೂ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ರವೀಂದ್ರ ಹದಿಮನಿ ಅವರು ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಪಿಎಸ್ಐ ರಾಘವೇಂದ್ರ ಖೊತ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
– ಸುಕುಮಾರ್ ಬನ್ನುರೆ, ಇನ್ ನ್ಯೂಸ್, ಕಾಗವಾಡ
