ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕಾಗವಾಡ ಗ್ರಾಮದ ಐತಿಹಾಸಿಕ ಕಾರು ಹುಣ್ಣಿಮೆ ಆಚರಣೆಯು ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಸಡಗರ-ಸಂಭ್ರಮದಿಂದ ನೆರವೇರಿತು. ಈ ಅಪರೂಪದ ಆಚರಣೆಯನ್ನು ವೀಕ್ಷಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ರೈತರು ಮತ್ತು ಸಾರ್ವಜನಿಕರು ಆಗಮಿಸಿದ್ದು, ಹಬ್ಬಕ್ಕೆ ವಿಶೇಷ ಮೆರುಗು ತಂದಿತು.

ಕಾಗವಾಡ ಕಾರು ಹುಣ್ಣಿಮೆಯ ಪ್ರಮುಖ ಆಕರ್ಷಣೆಯಾದ ಕರಿ ಹರಿಯುವ ಕಾರ್ಯಕ್ರಮದಲ್ಲಿ ಗೌಡರ ಮನೆತನದ ಎರಡು ಎತ್ತುಗಳು ಹಾಗೂ ಕರವ ಮನೆತನದ ಒಂದು ಎತ್ತು ಸೇರಿದಂತೆ ಒಟ್ಟು ಮೂರು ಎತ್ತುಗಳು ಪಾಲ್ಗೊಂಡಿದ್ದವು. ಇದರಲ್ಲಿ ಗೌಡರ ಮನೆತನದ ಎತ್ತು ಪ್ರಥಮವಾಗಿ ಕರಿ ಹರಿಯಲು ಯಶಸ್ವಿಯಾಯಿತು (ಪ್ರತಿಕ್ರಿಯೆಯಲ್ಲಿ ಕರವ ಮನೆತನದ ಎತ್ತು ಪ್ರಥಮವಾಗಿ ಕರಿ ಹರಿದು ಯಶಸ್ಸು ಸಾಧಿಸಿತು ಎಂದೂ ಉಲ್ಲೇಖಿಸಲಾಗಿದೆ).
ಕಾರು ಹುಣ್ಣಿಮೆಯ ದಿನದಂದು ಬೆಳಿಗ್ಗೆಯಿಂದ ಕರವ ಮನೆತನದ ಯುವಕನೊಬ್ಬ ಕೈಯಲ್ಲಿ ಬೆಳ್ಳಿ ಬಟ್ಟಲನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದನು. ಯುವಕನ ಸುತ್ತ ಗ್ರಾಮಸ್ಥರು ಕೈಯಲ್ಲಿ ಬಡಿಗೆ, ಆಯುಧಗಳನ್ನು ಹಿಡಿದು ರಕ್ಷಣೆಯಾಗಿ ಸಾಗಿದ್ದು ವಿಶೇಷವಾಗಿತ್ತು. ಸಂಜೆ ನಗರ ಪಂಚಾಯಿತಿ ಕಚೇರಿಯ ಎದುರು ಸುಮಾರು 10 ಅಡಿ ಎತ್ತರದ ಮುಳ್ಳಿನ ಬನ್ನಿಯ ಕಂಟಿಯನ್ನು ನೆಟ್ಟು ಅದರ ಮೇಲಿಂದ ಮೂರು ಎತ್ತುಗಳನ್ನು ಓಡಿಸಲಾಯಿತು. ಎತ್ತುಗಳಿಗೆ ಮೈತುಂಬ ಕೆಂಪು ಬಣ್ಣ ಬಳಿದು, ನೂರಾರು ಬಲಿಷ್ಠ ಯುವಕರು ಬರಿ ಮೈಯಲ್ಲಿ ವಾದ್ಯ ವೈಭವದೊಂದಿಗೆ ಘೋಷಣೆ ಕೂಗುತ್ತಾ ಕರಿ ಹರಿಯುವ ಸ್ಥಳಕ್ಕೆ ಆಗಮಿಸಿದರು. ಪೊಲೀಸ್ ಬಂದೂಕಿನ ಸಪ್ಪಳದೊಂದಿಗೆ ಮೂರು ಎತ್ತುಗಳು ‘ನಾ ಮುಂದು-ತಾ ಮುಂದು’ ಎಂಬಂತೆ ಕರಿ ಹರಿದವು. ಈ ವೇಳೆ ಯುವಕರು ತಮ್ಮ ಜೀವದ ಹಂಗು ತೊರೆದು ಸಂಪ್ರದಾಯದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಉತ್ತರ ಕರ್ನಾಟಕದಲ್ಲಿ ಕಾರು ಹುಣ್ಣಿಮೆಯನ್ನು ದನಗಳ ಹಬ್ಬವೆಂದು ಆಚರಿಸಲಾಗುತ್ತದೆಯಾದರೂ, ಕಾಗವಾಡದಲ್ಲಿ ಕರಿ ಹರಿಯುವ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದೆ.
ಈ ಕುರಿತು ಗ್ರಾಮದ ಹಿರಿಯರಾದ ಅರುಣ ಜೋಶಿ ಮಾತನಾಡಿ, “ಕಾಗವಾಡ ಕಾರು ಹುಣ್ಣಿಮೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಗ್ರಾಮದ ಎಲ್ಲಾ ಸಮಾಜದ ಬಾಂಧವರು ಒಗ್ಗೂಡಿ ಮನೆತನಗಳಿಗೆ ಸಂಪ್ರದಾಯಬದ್ಧವಾಗಿ ಮಾನ-ಸನ್ಮಾನ ನೀಡುತ್ತಾರೆ. ಕರವ ಮನೆತನದ ಬಾಲಕನ ಕೈಯಲ್ಲಿ ಬೆಳ್ಳಿ ಬಟ್ಟಲು ನೀಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವುದು ಈ ಆಚರಣೆಯ ಪ್ರಮುಖ ವೈಶಿಷ್ಟ್ಯವಾಗಿದೆ” ಎಂದು ತಿಳಿಸಿದರು.
ಗ್ರಾಮದ ಪಟ್ಟವರ್ಧನ ಮನೆತನದ ನ್ಯಾಯವಾದಿ ಸಮೀರ್ ಪಟ್ಟವರ್ಧನ್ ಮಾತನಾಡಿ, “ರಾಜ್ಯದ ಗಡಿಭಾಗದ ಕಾಗವಾಡದಲ್ಲಿ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಕಾರು ಹುಣ್ಣಿಮೆಯ ಕರಿ ಹರಿಯುವ ಕಾರ್ಯಕ್ರಮಕ್ಕೆ ವಿಶಿಷ್ಟ ಹಿನ್ನೆಲೆಯಿದೆ. ಇಂದಿಗೂ ಗ್ರಾಮದ ಎಲ್ಲ ಮುಖಂಡರು ಒಗ್ಗೂಡಿ ಈ ಅಪರೂಪದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ” ಎಂದು ಹೇಳಿದರು.
ಗೌಡರ ಮನೆತನದ ಮುಖಂಡ ಹಾಗೂ ನ್ಯಾಯವಾದಿ ಕಾಕಾಸಾಹೇಬ್ ಪಾಟೀಲ್ ಮಾತನಾಡಿ, “ಕರವ ಮನೆತನದ ಒಂದು ಎತ್ತು ಹಾಗೂ ಗೌಡರ ಮನೆತನದ ಎರಡು ಎತ್ತುಗಳಿಂದ ಕರಿ ಹರಿಯುವ ಸಂಪ್ರದಾಯ ಹಲವು ಶತಮಾನಗಳಿಂದ ನಡೆದು ಬಂದಿದೆ. ಇದು ಕಾಗವಾಡದ ಐತಿಹಾಸಿಕ ಪರಂಪರೆಯ ಪ್ರತೀಕವಾಗಿದೆ” ಎಂದು ಹೇಳಿದರು.
ಕರವ ಮನೆತನದ ಶುಭಂ ಕರವ ಮಾತನಾಡಿ, “ನಮ್ಮ ಮನೆತನಕ್ಕೆ ಕಾರು ಹುಣ್ಣಿಮೆಯ ದಿನವು ಸೂತಕದ ದಿನವಾಗಿದೆ. ನಮ್ಮ ಮನೆತನದಲ್ಲಿ ನಡೆದ ಐತಿಹಾಸಿಕ ಘಟನೆಯ ನೆನಪಿಗಾಗಿ ಈ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಗುತ್ತದೆ. ಮನೆತನದ ಬಾಲಕನ ಕೈಯಲ್ಲಿ ಬೆಳ್ಳಿ ಬಟ್ಟಲು ನೀಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಕರಿ ಹರಿಯುವ ಸ್ಥಳಕ್ಕೆ ಕರೆದುಕೊಂಡು ಹೋಗುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ” ಎಂದು ತಿಳಿಸಿದರು.
ಕಾರು ಹುಣ್ಣಿಮೆ ಹಬ್ಬವನ್ನು ಯಶಸ್ವಿಗೊಳಿಸಲು ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ರಾಘವೇಂದ್ರ ಖೋತ, ತಹಸೀಲ್ದಾರ್ ರವೀಂದ್ರ ಹಾದಿಮನಿ, ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಜ್ಯೋತಿಕುಮಾರ್ ಪಾಟೀಲ್, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಸೌರಭ ಪಾಟೀಲ್, ಪ್ರಕಾಶ್ ಪಾಟೀಲ್, ಮಾದಗೌಡ ಪಾಟೀಲ್, ಬಸಗೌಡ ಪಾಟೀಲ್, ಜ್ಯೋತಗೌಡ ಪಾಟೀಲ್, ಕಿರಣ್ ಫುಮಟೆ, ಅಜಿತ್ ಕರವ, ಪದ್ಮಾಕರ ಕರವ, ಆದಿನಾಥ್ ಕರವ, ಅರುಣ ಜೋಶಿ, ಸಹದೇವ ಚೌಗುಲೆ, ಮೀರಾಸಾಬ್ ಕಾಂಬಳೆ, ಉದಯ್ ವಡೆ, ವಿದ್ಯಾಧರ ಧೂಂಡಾರೆ, ಮಹಾವೀರ ದೊಂಡಾರೆ, ಜೈಪಾಲ್ ಬಡಿಗೇರ, ರಾಜು ವಡ್ಡರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ ಹಬ್ಬವನ್ನು ಯಶಸ್ವಿಗೊಳಿಸಿದರು.
ಸುಕುಮಾರ್ ಬನ್ನುರೆ, ಇನ್ ನ್ಯೂಸ್, ಕಾಗವಾಡ.
