ಇಡೀ ವಿಶ್ವದಲ್ಲಿ ನಿಸರ್ಗದ ಅಸಮತೋಲನ ಹೆಚ್ಚಾಗುತ್ತಿದ್ದು, ಮಳೆಗಾಲದಲ್ಲಿ ಅನಾವೃಷ್ಟಿ, ಚಳಿಗಾಲದಲ್ಲಿ ಅಧಿಕ ಚಳಿ ಹಾಗೂ ಬೇಸಿಗೆಯಲ್ಲಿ ವಿಪರೀತ ಬಿಸಿಲಿನಂತಹ ವಾತಾವರಣದ ಏರುಪೇರುಗಳು ಉಂಟಾಗುತ್ತಿವೆ. ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಕಾಡು ಬೆಳೆಸಬೇಕಾಗಿದೆ. ಉಗಾರ್ ಲಯನ್ಸ್ ಕ್ಲಬ್ ವತಿಯಿಂದ ಒಟ್ಟು 500 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷರಾದ ಡಾ. ಮೋಹನ್ ಕಟಗೇರಿ ತಿಳಿಸಿದರು.


ಗುರುವಾರದಂದು ಉಗಾರದ ವಿನಾಯಕವಾಡಿಯಿಂದ ಫರೀದಖಾನವಾಡಿ ಗ್ರಾಮಗಳ ಮಧ್ಯದ ರಸ್ತೆಯ ಎರಡೂ ಬದಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಅಧ್ಯಕ್ಷ ಡಾ. ಮೋಹನ್ ಕಟಗೇರಿ, ಕಾರ್ಯದರ್ಶಿ ಡಾ. ಆನಂದ್ ಕುಂಬಾರ್ ಹಾಗೂ ಪದಾಧಿಕಾರಿಗಳು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಲಯನ್ಸ್ ಕ್ಲಬಿನ ಕಾರ್ಯದರ್ಶಿ ಡಾ. ಆನಂದ್ ಕುಂಬಾರ್, “ಲಯನ್ಸ್ ಕ್ಲಬ್ ಒಂದು ಸಮಾಜಸೇವಾ ಸಂಸ್ಥೆಯಾಗಿದ್ದು, ಇಡೀ ವಿಶ್ವದಾದ್ಯಂತ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಉಗಾರ್ ಶಾಖೆಯ ವತಿಯಿಂದಲೂ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರದಲ್ಲಾಗುತ್ತಿರುವ ಅಸಮತೋಲನವನ್ನು ಹೋಗಲಾಡಿಸಲು ಈ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿ, ಉಗಾರ್ ಕ್ಲಬ್ಬಿನ ನಿಸ್ವಾರ್ಥ ಸೇವೆಗೆ ಕೈಜೋಡಿಸಲು ಸಾರ್ವಜನಿಕರು ಸದಸ್ಯರಾಗಲು ಮುಂದೆ ಬರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ಬಿನ ಹಿರಿಯ ಸದಸ್ಯರಾದ ಭೂಪಾಲ್ ಚೌಗುಲೆ, ಪಿ.ಬಿ. ಕುಲಕರ್ಣಿ, ಮನೋಜ್ ಮಾಲಗತ್ತೆ, ಮಹಾದೇವ್ ದಾನನ್ನವರ ಹಾಗೂ ಪುರಸಭೆ ಸದಸ್ಯರಾದ ರಾಜು ಪಾಟೀಲ್, ಪ್ರಕಾಶ್ ಥೂರುಶೆ, ಅಜಿತ್ ಕಟಗೇರಿ, ಸಂಜಯ್ ಚವ್ಹಾಣ್, ವಿನಾಯಕ ಕಾಂಬಳೆ, ಸೋಮೇಶ್ವರ ಅಂಬೆಲೆ, ಶಿವಮೂರ್ತಿ ಕಟಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
