ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಲು ಆಗ್ರಹಿಸಿ, ಧಾರವಾಡದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಗೋವುಗಳ ಪರ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, “ಗೋಮಾತೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು. ದೇಶದಲ್ಲಿ ಗೋವುಗಳ ನಿರಂತರ ಹತ್ಯೆಯಾಗುತ್ತಿದೆ ಮತ್ತು ಅವುಗಳ ಮಾಂಸ ರಫ್ತಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಅವರಿಗೆ ಇದೆಲ್ಲ ಕಾಣುತ್ತಿಲ್ಲವೇ? 12 ವರ್ಷಗಳಿಂದ ಮೋದಿ ಅವರು ಅಧಿಕಾರದಲ್ಲಿದ್ದಾರೆ, ಅವರಿಗೆ ಗೋವುಗಳ ಆರ್ತನಾದ ಕೇಳಿಸುತ್ತಿಲ್ಲವೇ? ಮೋದಿ ಅವರೊಬ್ಬರೇ ಈಗ ಹಿಂದೂಗಳಿಗೆ ಹಾಗೂ ಗೋವುಗಳಿಗೆ ರಕ್ಷಕರಾಗಿದ್ದಾರೆ. ಅವರೇ ಈ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.
ಮುಂದುವರಿದು, “ಗೋಮಾಳ ಜಾಗಗಳನ್ನು ರಕ್ಷಣೆ ಮಾಡಿ ಅವುಗಳನ್ನು ಗೋವುಗಳಿಗೆ ಉಳಿಸಬೇಕು. ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಗೋವುಗಳ ರಕ್ತ ಹರಿಯುವುದನ್ನು ನಿಲ್ಲಿಸಲು ಆಗುತ್ತಿಲ್ಲ. ಈ ನಿರ್ಲಜ್ಜ ರಾಜಕಾರಣಿಗಳಿಗೆ ಗೋವಿನ ಹಾಲು, ಮೊಸರು, ತುಪ್ಪ ಬೇಕು; ಕೊನೆಗೆ ಅದರ ಸಗಣಿಯೂ ಬೇಕು. ಆದರೆ, ಗೋಹತ್ಯೆ ನಿಲ್ಲಿಸುವುದು ಇವರಿಗೆ ಬೇಡ. ಕೇಂದ್ರ ಸರ್ಕಾರ ಈ ಬಗ್ಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದೆ. ಮೋದಿ ಅವರು ಗೋವಿನ ವೇದನೆಯನ್ನು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿಯೇ ದೇಶದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸುತ್ತಿದ್ದೇವೆ” ಎಂದರು.
