ರಾಜ್ಯದಲ್ಲಿ ನೀಟ್ ಪರೀಕ್ಷೆ ವಿಷಯವಾಗಿ ವಿದ್ಯಾರ್ಥಿಗಳು ನಡೆಸುತ್ತಿದ್ದ ನ್ಯಾಯಯುತ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷವು ತನ್ನ ಸ್ವಾರ್ಥ ರಾಜಕೀಯ ಹಾಗೂ ಸೈದ್ಧಾಂತಿಕ ಅಜೆಂಡಾಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಪರವಾದ ಅಹಿಂಸಾತ್ಮಕ ಮತ್ತು ನ್ಯಾಯಯುತ ಹೋರಾಟದಲ್ಲಿ ಉಮರ್ ಖಾಲೀದ್ ಹಾಗೂ ಶರ್ಜೀಲ್ ಇಮಾಮ್ ಅವರಂತಹ ವಿವಾದಾತ್ಮಕ ವ್ಯಕ್ತಿಗಳ ಪೋಸ್ಟರ್ಗಳನ್ನು ಪ್ರದರ್ಶಿಸಿರುವುದು ದೇಶದ ಯುವಜನರನ್ನು ದಾರಿ ತಪ್ಪಿಸುವ ದೊಡ್ಡ ಕುತಂತ್ರವಾಗಿದೆ. ಸ್ವತಃ ವಿದ್ಯಾರ್ಥಿಗಳೇ ಈ ವಿವಾದಾತ್ಮಕ ನಡೆಗೆ ವಿರೋಧ ವ್ಯಕ್ತಪಡಿಸಿದ್ದರೂ, ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಇದನ್ನು ಸಮರ್ಥಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದ ಅಸಲಿ ಮುಖವಾಡವನ್ನು ಕಳಚಿದೆ. ಕಾಂಗ್ರೆಸ್ ನಾಯಕರು ವಿದ್ಯಾರ್ಥಿಗಳ ಜೊತೆ ದೃಢವಾಗಿ ನಿಲ್ಲುವ ಬದಲು, ವಿವಾದಾತ್ಮಕ ವ್ಯಕ್ತಿಗಳ ಬೆಂಬಲಕ್ಕೆ ನಿಂತಿರುವುದು ಅವರ ಕೀಳು ರಾಜಕೀಯ ಮನಸ್ಥಿತಿಯನ್ನು ತೋರಿಸುತ್ತದೆ. ಮುಗ್ಧ ವಿದ್ಯಾರ್ಥಿಗಳ ಹೋರಾಟವನ್ನು ಹೈಜಾಕ್ ಮಾಡಿ ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಸಾಧಿಸಲು ಹೊರಟಿರುವುದು ಖಂಡನೀಯ. ದೇಶದ್ರೋಹಿ ವ್ಯಕ್ತಿಗಳ ಬೆಂಬಲಕ್ಕೆ ನಿಂತಿರುವ ಬಿ.ಕೆ. ಹರಿಪ್ರಸಾದ ಕೂಡಲೇ ಜನತೆಯ ಕ್ಷಮಾಪಣೆ ಕೇಳಬೇಕು. ವಿದ್ಯಾರ್ಥಿಗಳು ನ್ಯಾಯ, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಸಂಪೂರ್ಣ ಅರ್ಹರಾಗಿದ್ದಾರೆ. ಕೆಲವರ ಸ್ವಾರ್ಥ ರಾಜಕೀಯ ಹಿತಾಸಕ್ತಿಗಳಿಂದ ವಿದ್ಯಾರ್ಥಿಗಳ ಈ ನ್ಯಾಯಯುತ ಹೋರಾಟವು ದಿಕ್ಕು ತಪ್ಪಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಎಂದು ಶ್ರೀ ಅರವಿಂದ ಬೆಲ್ಲದ ಎಚ್ಚರಿಸಿದ್ದಾರೆ.
