Bailahongala

ಬೈಲಹೊಂಗಲದಲ್ಲಿ ಶೌರ್ಯದ ಪರಾಕಾಷ್ಠೆ: ಮಲಪ್ರಭಾ ನದಿಗೆ ಧುಮುಕಿ ಯುವತಿಯ ಜೀವ ಉಳಿಸಿದ ಉರಗ ಪ್ರೇಮಿ!

Share

ಜೀವನದ ಮೇಲಿನ ಆಸೆಯನ್ನು ಕಳೆದುಕೊಂಡು ಮಲಪ್ರಭಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೊಬ್ಬಳನ್ನು ತನ್ನ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಸಮಾಜಸೇವಕ ಹಾಗೂ ಉರಗ ಪ್ರೇಮಿ ಮಲ್ಲಿಕಾರ್ಜುನ ಗಾಣಿಗೇರ ಅವರ ಸಾಹಸ ಕಾರ್ಯ ಬೈಲಹೊಂಗಲದಲ್ಲಿ ಮಾನವೀಯತೆಯ ಅಪರೂಪದ ಸ್ಪರ್ಶವಾಗಿ ಹೊರಹೊಮ್ಮಿದೆ.

ಮಂಗಳವಾರ ಸಂಜೆ ನಯಾನಗರ ಸಮೀಪದ ಮಲಪ್ರಭಾ ನದಿ ಸೇತುವೆ ಬಳಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಸುಮಾರು 120 ಅಡಿ ಎತ್ತರದ ಸೇತುವೆಯಿಂದ ಯುವತಿ ನದಿಗೆ ಜಿಗಿದಿರುವುದನ್ನು ಗಮನಿಸಿದ ಸ್ಥಳೀಯರು ಕೆಲ ಕ್ಷಣಗಳ ಕಾಲ ಆತಂಕಕ್ಕೊಳಗಾದರು. ನದಿಯ ನೀರಿನ ಸೆಳೆತ ಹೆಚ್ಚಿದ್ದ ಕಾರಣ ಯಾರೂ ನೀರಿಗೆ ಇಳಿಯಲು ಧೈರ್ಯ ಮಾಡಲಿಲ್ಲ.ಈ ವೇಳೆ ಸ್ಥಳದಲ್ಲಿದ್ದ ನಾಗರಿಕರು ಸಮಾಜಸೇವಕ ಹಾಗೂ ಉರಗ ಪ್ರೇಮಿ ಮಲ್ಲಿಕಾರ್ಜುನ ಗಾಣಿಗೇರ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ವಿಷಯ ತಿಳಿದ ಕೂಡಲೇ ಅವರು ಕ್ಷಣವೂ ವಿಳಂಬ ಮಾಡದೆ ಸ್ಥಳಕ್ಕೆ ಧಾವಿಸಿ, ತಮ್ಮ ಜೀವದ ಹಂಗು ತೊರೆದು ನೇರವಾಗಿ ಮಲಪ್ರಭಾ ನದಿಗೆ ಧುಮುಕಿ, ನೀರಿನಲ್ಲಿ ಮುಳುಗುತ್ತಿದ್ದ ಯುವತಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಪ್ರಾಥಮಿಕ ಉಪಚಾರ ನೀಡಿ ಪೊಲೀಸ್ ಠಾಣೆ ಗೆ ಕರೆ ತಂದಿದ್ದಾರೆ ಈ ಘಟನೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮಲ್ಲಿಕಾರ್ಜುನ ಗಾಣಿಗೇರ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ಒಂದು ಅಮೂಲ್ಯ ಜೀವ ಉಳಿದಿದ್ದು, ಸ್ಥಳದಲ್ಲಿದ್ದ ಜನರು ಭಾವುಕರಾಗಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಸ್ವಂತ ಜೀವವನ್ನೇ ಪಣಕ್ಕಿಟ್ಟು ಮತ್ತೊಬ್ಬರ ಜೀವ ಉಳಿಸುವುದು ನಿಜವಾದ ಮಾನವೀಯತೆಯ ಸ್ಪರ್ಶ” ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಪಿಐ ಪ್ರಮೋದ ಯಲಿಗಾರ ಅವರು ಕೂಡ ಮಲ್ಲಿಕಾರ್ಜುನ ಗಾಣಿಗೇರ ಅವರ ಧೈರ್ಯ, ಸಮಯಪ್ರಜ್ಞೆ ಹಾಗೂ ಮಾನವೀಯ ಸೇವೆಯನ್ನು ಅಭಿನಂದಿಸಿ, ಇಂತಹ ಸಮಾಜಸೇವಕರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

Tags:

error: Content is protected !!