Belagavi

ಬಾಗಲಕೋಟೆ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ!

Share

ಬಾಗಲಕೋಟೆಯ ನವನಗರ ಬಸ್ ನಿಲ್ದಾಣಕ್ಕೆ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ಸೌಲಭ್ಯ ಹಾಗೂ ನೈರ್ಮಲ್ಯದ ಕೊರತೆ ಕಂಡು ಅಧಿಕಾರಿಗಳು ಮತ್ತು ವ್ಯಾಪಾರಿಗಳಿಗೆ ತರಾಟೆ ತೆಗೆದುಕೊಂಡಿರುವ ಅವರು, ಪ್ರಯಾಣಿಕರ ಆರೋಗ್ಯದೊಂದಿಗೆ ಆಟವಾಡಿದರೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ: ಜಿಲ್ಲೆಯ ನವನಗರ ಕೇಂದ್ರ ಬಸ್ ನಿಲ್ದಾಣಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ ಆವರಣದಲ್ಲಿರುವ ಹೋಟೆಲ್‌ಗಳು, ಬೇಕರಿಗಳು ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಮೂಲಭೂತ ಸೌಕರ್ಯಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದರು. ಆಹಾರ ತಯಾರಿಕಾ ಸ್ಥಳ ಹಾಗೂ ಪರಿಸರದ ಸ್ವಚ್ಛತೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಅವರು, ನೈರ್ಮಲ್ಯ ಕಾಪಾಡದ ಅಂಗಡಿ ಮಾಲೀಕರು ಮತ್ತು ಇದಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲೇ ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡರು.

ಬಸ್ ನಿಲ್ದಾಣಕ್ಕೆ ದಿನಂಪ್ರತಿ ಸಾವಿರಾರು ಪ್ರಯಾಣಿಕರು ಬಂದು ಹೋಗುವುದರಿಂದ ಅವರ ಆರೋಗ್ಯದೊಂದಿಗೆ ನಿರ್ಲಕ್ಷ್ಯ ವಹಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉಪ ಲೋಕಾಯುಕ್ತರು ಖಡಕ್ ಎಚ್ಚರಿಕೆ ನೀಡಿದರು. ನಿಯಮಾನುಸಾರ ಸ್ವಚ್ಛತೆ ಕಾಪಾಡಿಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು. ಇದೇ ವೇಳೆ ನವನಗರದಲ್ಲಿರುವ 108 ನಾಯಿ ಸಂತಾನಹರಣ ಶಸ್ತ್ರಚಿಕಿತ್ಸೆ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:

error: Content is protected !!