Vijaypura

ವಿಜಯಪುರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಬರದ ಛಾಯೆ, ಅನ್ನದಾತರಲ್ಲಿ ಆತಂಕ; ಆಲಮಟ್ಟಿ ಜಲಾಶಯಕ್ಕೆ ಹರಿದು ಬಂದ ಅಪಾರ ನೀರು, ಕಾಲುವೆಗಳ ಮೂಲಕ ನೀರು ಹರಿಸುವಂತೆ ಒತ್ತಾಯ…

Share

ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು, ಭೀಕರ ಬರದ ಛಾಯೆ ಆವರಿಸಿದೆ. ಮಳೆಗಾಗಿ ರೈತರು ಆಕಾಶದತ್ತ ನೋಡುವಂತಾಗಿದೆ. ಇನ್ನೊಂದೆಡೆ ಮುಂಗಾರು ಮಳೆ ನಿರಿಕ್ಷೆಯಲ್ಲಿ ರೈತ ಬಿತ್ತಿದ ಬೀಜ ಮಳೆಯಾಗದ ಕಾರಣ ಮೊಳಕೆ ಒಡೆದಿಲ್ಲ. ಇನ್ನೊಂದೆಡೆ ಪಶ್ಚಿಮ ಘಟದಲ್ಲಿ ಅಧಿಕ ಮಳೆಯಾದ ಕಾರಣ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದು ರೈತರ ಮೊಗದಲ್ಲಿ ಸಂತಸ ತರಿಸಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ವಿಜಯಪುರ ಜಿಲ್ಲೆಯಲ್ಲಿ ಒಂದೆಡೆ ಬರದ ಛಾಯೆ ಆವರಿಸಿದ್ದರೆ, ಇನ್ನೊಂದೆಡೆ ಆಲಮಟ್ಟಿ ಜಲಾಶಯ ಭರ್ತಿ ಆಗುತ್ತಿದೆ. ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಅಧಿಕ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿದ್ದು ಇದಕ್ಕೆ ಕಾರಣ ಮಹಾರಾಷ್ಟ್ರದ ಪಶ್ಚಿಮ ಘಟದಲ್ಲಿ ಅಧಿಕ ಮಳೆಯಾಗಿದ್ದು. ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಇದ್ದ ಅನ್ನದಾತ ಸಂಪೂರ್ಣ ಕೈ ಕಟ್ಟಿ ಕುಳಿತು ಕೊಳ್ಳುವಂತಾಗಿದೆ. ತಾನು ಜಮೀನಿನಲ್ಲಿ ಬಿತ್ತಿದ ಬೀಜ ಮಳೆಯಾಗದ ಕಾರಣ ಮೊಳಕೆ ಒಡೆದಿಲ್ಲ ಹೀಗಾಗಿ ಅನ್ನದಾತ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ವಿಜಯಪುರ‌ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಶೇಕಡಾ 20% ರಷ್ಟು ಮಳೆ ಕೊರತೆಯಾಗಿದ್ದರೆ, ಜುಲೈ ತಿಂಗಳಲ್ಲಿಯೂ ಈವರೆಗೆ ಶೇಕಡಾ 15% ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯ ಒಟ್ಟು 7.5 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಪೈಕಿ 5 ಲಕ್ಷದ 32 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಅಂದರೆ ಕೇವಲ 67% ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದಿಲ್ಲ. ಸಾವಿರಾರು ರೂಪಾಯಿ ಸಾಲ ಮಾಡಿ ತೊಗರಿ, ಈರುಳ್ಳಿ, ಕುಸುಬಿ ಹಾಗೂ ಗೋವಿನ ಜೋಳ ಬಿತ್ತನೆ ಮಾಡಿದ ರೈತರಿಗೆ ಮಳೆ ಇಲ್ಲದೆ ನಿರಾಸೆಯಾಗಿದೆ. ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಮಣ್ಣಿನಲ್ಲೇ ಕೊಳೆತು ಹೋಗುತ್ತಿದ್ದರೆ, ಮತ್ತೊಂದೆಡೆ ಬಿತ್ತನೆ ಮಾಡಲಾಗದೆ ಲಕ್ಷಾಂತರ ಎಕರೆ ಭೂಮಿ ಖಾಲಿ ಬಿದ್ದಿದೆ…

ಒಂದೆಡೆ ಜಿಲ್ಲೆಯಾದ್ಯಂತ ಬರದ ಛಾಯೆ ಆವರಸಿದ್ದರೆ, ಇನ್ನೊಂದೆಡೆ ವಿಜಯಪುರ ಜಿಲ್ಲೆಯಲ್ಲಿ ಮಳೆಯಾಗದೇ ಇದ್ದರೂ ಆಲಮಟ್ಟಿ ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಮಹಾರಾಷ್ಟ್ರದ ಪಶ್ಚಿಮ ಘಟದಲ್ಲಿ ಸುರಿದ ಅಧಿಕ ಮಳೆಯ ಪರಿಣಾಮ ಅಪಾರ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬಂದಿದೆ. ಕಳೆದ 20 ದಿನಗಳ ಹಿಂದಷ್ಟೇ ಬರಿದಾಗಿದ್ದ ಜಲಾಶಯ ಈಗ ಭರ್ತಿ ಹಂತಕ್ಕೆ ತಲುಪಿದ್ದು ರೈತರ ಮೊಗದಲ್ಲಿ ಸಂತಸ ತರಿಸಿದೆ. ಇನ್ನೊಂದೆಡೆ ಮುಂಗಾರ ಮಳೆಯ ನಿರಿಕ್ಷೆಯಲ್ಲಿ ಬಿತ್ತಿದ ಬೆಳೆಗಳು ಹಾಳಾಗುತ್ತಿದ್ದು ಆಲಮಟ್ಟಿ ಜಲಾಶಯದಿಂದ ಕ್ಯಾನಲ್ ಮೂಲಕ ನೀರು ಹರಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ…

ಬರದಿಂದ ಕಂಗೆಟ್ಟ ರೈತ ಕಣ್ಣೀರಿಡುವಂತಾಗಿದೆ. ಆಲಮಟ್ಟಿ ಜಲಾಶಯದಿಂದ ಕ್ಯಾನಲ್ ಮೂಲಕ ನೀರು ಹರಿಸುವಂತೆ ಒತ್ತಾಯ ಹೆಚ್ಚಾಗುತ್ತಿದೆ. ವಿಜಯಪುರ ಜಿಲ್ಲೆಯ ಅನ್ನದಾತನಿಗೆ ಈಗ ಸರ್ಕಾರದ ತುರ್ತು ನೆರವಿನ ಅಗತ್ಯವಿದ್ದು, ಬರ ಘೋಷಣೆ ಹಾಗೂ ರೈತರ ಸಾಲ ಮನ್ನಾ ಬೇಡಿಕೆಗೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ…

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ…

Tags:

error: Content is protected !!