ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 13 ವರ್ಷಗಳ ಆಡಳಿತಾವಧಿಯಲ್ಲಿ ಸುಮಾರು 154 ವಿವಿಧ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಹಗರಣಗಳು ನಡೆದಿವೆ. ಇದನ್ನು ಖಂಡಿಸಿ ಪರಿಸರ ಪ್ರೇಮಿ ಸೋನಂ ವಾಂಗ್ಚುಕ್ ಅವರು ಪ್ರತಿಭಟನೆ ಕೈಗೊಂಡಿದ್ದಾರೆ. ಅವರಿಗೆ ಬೆಂಬಲ ಸೂಚಿಸಲು ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಪಕ್ಷಾತೀತ, ಜಾತ್ಯತೀತ ಹಾಗೂ ಸಮಸ್ತ ಪ್ರಜ್ಞಾವಂತ ನಾಗರಿಕರು ಒಂದಾಗಿದ್ದೇವೆ ಎಂದು ಉತ್ತರ ಕರ್ನಾಟಕ ಭಾರತೀಯ ಬೌದ್ಧ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸುಭಾಷ್ ಢಾಲೆ ಹೇಳಿದರು.

ಬುಧವಾರ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಾತ್ಯತೀತ ಹಾಗೂ ಪಕ್ಷಾತೀತ ವಿಚಾರವಂತರು, ಸನ್ಮತಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಂದುಗೂಡಿ ಬೃಹತ್ ಪ್ರತಿಭಟನೆ ನಡೆಸಿ ಸೋನಂ ಅವರಿಗೆ ಬೆಂಬಲ ಸೂಚಿಸಿದರು.
ಈ ವೇಳೆ ಸುಭಾಷ್ ಢಾಲೆ ಅವರು ಮುಂದುವರಿದು ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದೇಶದ ಯುವಜನತೆಗೆ ಮೋಸ ಮಾಡುತ್ತಿದ್ದಾರೆ. ಸಾಧಾರಣ ಬಡ ಕುಟುಂಬದ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿ ‘ನೀಟ್’ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಾರೆ. ಆದರೆ ಕೆಲವರು ಅಕ್ರಮವೆಸಗಿ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿ ಶ್ರೀಮಂತ ಮನೆತನದ ಮಕ್ಕಳಿಗೆ ಉತ್ತೀರ್ಣರಾಗಲು ವ್ಯವಸ್ಥೆ ಮಾಡುತ್ತಿದ್ದಾರೆ. ಈ ಹಗರಣದಿಂದ ಮನನೊಂದು 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಕುಟುಂಬಗಳ ಮೇಲಾದ ಪರಿಣಾಮವನ್ನು ದೇಶದ ಜನಪ್ರತಿನಿಧಿಗಳು ಕನಿಷ್ಠ ಯೋಚನೆಯನ್ನೂ ಮಾಡಲಿಲ್ಲ. ಇದರಿಂದ ನೊಂದ ಸೋನಂ ಅವರು ಉಪವಾಸ ಸತ್ಯಾಗ್ರಹ ಕೈಗೊಂಡರೆ, ಅವರಿಗೆ ಸೂಕ್ತ ಪರಿಹಾರ ನೀಡದೆ ಅವರ ಮೇಲೆಯೇ ದಬ್ಬಾಳಿಕೆ ಮಾಡಲಾಗುತ್ತಿದೆ. ಇಂದಿನ ಯುವಕರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಯುವಜನತೆ ಸೋನಂ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅದೇ ರೀತಿ ಶೇಡಬಾಳದ ವಿಚಾರವಂತರೆಲ್ಲರೂ ಒಗ್ಗೂಡಿ ಬೆಂಬಲಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ನ್ಯಾಯವಾದಿ ರಾಹುಲ್ ಕಟಗೇರಿ ಅವರು ಕೇಂದ್ರ ಸರ್ಕಾರದ ದಬ್ಬಾಳಿಕೆಯ ರಾಜಕೀಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಜೈ ಕರ್ನಾಟಕ ಯುವಕ ಸಂಘ’ದ ಕಾರ್ಯಕರ್ತರು, ಸನ್ಮತಿ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದ ಪ್ರಾಚಾರ್ಯ ಬಾಹುಬಲಿ ಬನಿಜವಾಡ ಹಾಗೂ ಸರ್ವ ಪ್ರಾಧ್ಯಾಪಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತೀವ್ರ ಆಕ್ರೋಶ ಹೊರಹಾಕಿದರು.
ದಲಿತ ಮುಖಂಡ ಸುಭಾಷ್ ಢಾಲೆ, ಶ್ರೀನಿವಾಸ್ ಕಾಂಬಳೆ, ಸುನಿಲ್ ಕಾಳೆ, ನ್ಯಾಯವಾದಿ ರಾಹುಲ್ ಕಟಗೇರಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಕಾಗವಾಡ ಗ್ರೇಡ್-2 ತಹಸೀಲ್ದಾರ್ ಶ್ರೀಮತಿ ರಶ್ಮಿ ಜಕಾತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಿಎಸ್‌ಐ ರಾಘವೇಂದ್ರ ಖೋತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುಕುಮಾರ್ ಬನ್ನುರೆ, ಇನ್ ನ್ಯೂಸ್, ಕಾಗವಾಡ.
