ಕಾಗವಾಡ ತಾಲೂಕಿನ ಮಂಗಸುಳಿ ಹಾಗೂ ಪರಿಸರದ ರೈತರು ಕಾಲುವೆಗೆ ನೀರು ಹರಿಸುವಂತೆ ಶಾಸಕರು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಂದೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ, ಇದೀಗ ಕಾಲುವೆಗೆ ನೀರು ಹರಿದು ಬಿಡಲಾಗುತ್ತಿದೆ.


ಐನಾಪುರ ಏತ ನೀರಾವರಿ ಯೋಜನೆ ಪ್ರಾರಂಭವಾದ ಕೇವಲ ಐದೇ ದಿನಗಳಲ್ಲಿ ಸ್ಥಗಿತಗೊಂಡಿತ್ತು. ಆದರೆ, ಈಗ ರೈತರ ಒತ್ತಾಯಕ್ಕೆ ಮಣಿದು ಮತ್ತೆ ಕೆನಾಲ್ ಮೂಲಕ ನೀರು ಹರಿಸಿರುವುದರಿಂದ ರೈತರು ಹರ್ಷ ವ್ಯಕ್ತಪಡಿಸಿದ್ದು, ಶನಿವಾರ ಬೆಳಗ್ಗೆ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಜುಲೈ ತಿಂಗಳ 10 ರಂದು ಯೋಜನೆ ಪ್ರಾರಂಭವಾಗಿದ್ದರೂ, ಜುಲೈ 15ರಂದು ಇದನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬಿತ್ತನೆ ಮಾಡಿದ ಬೆಳೆಗಳಿಗೆ ಆಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು, ಮಂಗಸುಳಿ ಗ್ರಾಮದ ರೈತ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ ಅವರ ನೇತೃತ್ವದಲ್ಲಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಐನಾಪುರ ನೀರಾವರಿ ಯೋಜನೆಗೆ ಮತ್ತೆ ಚಾಲನೆ ನೀಡಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

“ಮಂಗಸುಳಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸುಮಾರು 27 ಸಾವಿರ ಹೆಕ್ಟೇರ್ ಪ್ರದೇಶ ಐನಾಪುರ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ಕಳೆದ ವರ್ಷ ಸರಿಯಾದ ಸಮಯಕ್ಕೆ ಮಳೆಯಾಗಿದ್ದರಿಂದ ಕಾಲುವೆಗೆ ನೀರು ಹರಿಸಲಾಗಿತ್ತು, ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಈ ವರ್ಷ ಜುಲೈ 10ರವರೆಗೆ ನದಿಗೆ ನೀರು ಬಂದ ಹಿನ್ನೆಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಯಿತಾದರೂ, ಕೇವಲ ಐದು ದಿನಗಳಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ ಮೇಲಾಧಿಕಾರಿಗಳ ಆದೇಶದಂತೆ ಸ್ಥಗಿತಗೊಳಿಸಲಾಗಿತ್ತು. ಈಗ ರೈತರ ತೀವ್ರ ಬೇಡಿಕೆಯನ್ನು ಪರಿಗಣಿಸಿ ಮತ್ತೆ ಚಾಲನೆ ನೀಡಲಾಗಿದೆ. ಇನ್ನು 30 ದಿನಗಳ ಕಾಲ ಈ ಯೋಜನೆ ಕಾರ್ಯನಿರ್ವಹಿಸಲಿದ್ದು, ಇದರಿಂದ ರೈತರ ಬೆಳೆಗಳಿಗೆ ಹೆಚ್ಚಿನ ಲಾಭವಾಗಲಿದೆ.”

– ರವೀಂದ್ರ ಪೂಜಾರಿ, ಮಾಜಿ ಜಿ.ಪಂ. ಸದಸ್ಯ
ಇದೇ ವೇಳೆ ಪ್ರಗತಿಪರ ರೈತರು ಹಾಗೂ ಅಶೋಕ್ ಪಿ.ಕೆ.ಪಿ.ಎಸ್. ಸಂಸ್ಥೆಯ ಅಧ್ಯಕ್ಷ ಮುಕುಂದ ಪೂಜಾರಿ ಮಾತನಾಡಿ, “ರೈತರ ಸಮಸ್ಯೆಗಳನ್ನು ಅರಿತು ಈ ಯೋಜನೆಗೆ ಮರುಚಾಲನೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಥಣಿ ಶಾಸಕ ಲಕ್ಷ್ಮಣ್ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಹಾಗೂ ರಾಜ್ಯ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಧನ್ಯವಾದಗಳು. ಹಾಗೆಯೇ ರೈತರ ಪರವಾಗಿ ಶ್ರಮಿಸಿದ ಮಂಗಸುಳಿ ಗ್ರಾಮದ ಹಿರಿಯರಾದ ರವೀಂದ್ರ ಪೂಜಾರಿ ಅವರ ಪ್ರಯತ್ನ ಶ್ಲಾಘನೀಯ” ಎಂದರು.
ರೈತರು ಒಂದುಗೂಡಿ ಜಯಘೋಷ:
ಕೃಷ್ಣಾ ನದಿಯಲ್ಲಿ ಹರಿದು ಬರುತ್ತಿರುವ ನೀರಿಗೆ ರೈತರೆಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಜೊತೆಗೆ ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರ ಮತ್ತು ಸಚಿವರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಾಳು ಉಪಾಧ್ಯಾಯ, ಸಾವಂತ್ ಅದಕೆ, ದೀಪಕ್ ಕಡಕೋಳಿ, ಭರತ್ ಮಾಳಿ, ರಮೇಶ್ ಮಾಳಿ, ಗಜುಗಾಡೆ ಸಮಜಿಗೆ, ಗಣಪತಿ ಮಾಳಿ, ದಿಲೀಪ್ ಮಗದೂಮ್, ರಮೇಶ್ ನಾಯ್ಕ್, ಸಂತೋಷ್ ಕುಡುಚಿ, ಬಾಬಾ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.
