bagalkot

ಬಿಡದಿ ಟೌನ್‌ಶಿಪ್ ವಿವಾದ: ಸಿಎಂ ಡಿ.ಕೆ.ಶಿವಕುಮಾರ್ ನಾಟಕ ಮಂಡಳಿ ಅಧ್ಯಕ್ಷರಂತಿದ್ದಾರೆ ಎಂದು ಬಾಗಲಕೋಟೆಯ ಕೆಂದೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಲೇವಡಿ!

Share

ಬಿಡದಿ ಟೌನ್‌ಶಿಪ್ ಮತ್ತು ಸಿಎಂ ಸಮಿತಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ವಾಗ್ದಾಳಿ ತೀವ್ರಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಕೆಂದೂರು ಗ್ರಾಮದಲ್ಲಿ ಮಾತನಾಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸಿಎಂ ದ್ವಂದ್ವ ನಿಲುವು ತಳೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೆಂದೂರು ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ. ಬಿಡದಿ ಟೌನ್‌ಶಿಪ್ ಮತ್ತು ಸಿಎಂ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಈಗ ತಾನೇ ಒಂದು ಹೊಸ ಸ್ಕ್ರಿಪ್ಟ್ ಬರೆದುಕೊಂಡು ಬಂದು ಆಸ್ಕರ್ ಮಟ್ಟದ ಪರ್ಫಾರ್ಮೆನ್ಸ್ ಡೆಲಿವರಿ ಮಾಡಿ ಹೋಗಿದ್ದಾರೆ ಎಂದು ಲೇವಡಿ ಮಾಡಿದರು. ಜಿಬಿಡಿಎ ರಿವ್ಯೂ ಕಮಿಟಿ ಮಾಡುತ್ತೇನೆ ಎಂದು ಒಂದು ಕಡೆ ಹೇಳುವ ಮುಖ್ಯಮಂತ್ರಿಗಳು, ಹಾಗಿದ್ದರೆ ಇವತ್ತೇ ಮೂರು ಊರುಗಳ ಅಂತಿಮ ಅಧಿಸೂಚನೆಯನ್ನು ಯಾಕೆ ಹೊರಡಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಇದರಿಂದಲೇ ಸಿಎಂ ಮನಸ್ಥಿತಿ ದ್ವಂದ್ವದಿಂದ ಕೂಡಿದೆ ಎಂಬುದು ಗೊತ್ತಾಗುತ್ತದೆ ಹಾಗೂ ಅವರೇ ಈ ನಾಟಕ ಮಂಡಳಿಯ ಅಧ್ಯಕ್ಷರಾಗಿರಬೇಕು ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅವಧಿಯ ನಿರ್ಧಾರಗಳನ್ನು ಸಮರ್ಥಿಸಿಕೊಂಡ ನಿಖಿಲ್, ಹೆಚ್‌ಡಿಸಿ ಅವರು ಈ ಹಿಂದೆ ಪ್ರಿಲಿಮಿನರಿ ನೋಟಿಫಿಕೇಶನ್ ಮಾಡಿರಲಿಲ್ಲ ಮತ್ತು ಆ ಭಾಗವನ್ನು ರೆಡ್ ಜೋನ್ ಕೂಡ ಮಾಡಿರಲಿಲ್ಲ, ಕೇವಲ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು ಅಷ್ಟೇ ಎಂದರು. ಇದು ಕುಮಾರಸ್ವಾಮಿ ಅವರ ಕನಸಿನ ಕೂಸು ಎಂದು ಹೇಳುವ ನೀವು, ಈಗ ಅದನ್ನೇಕೆ ತಲೆ ಮೇಲೆ ಕುಳ್ಳಿರಿಸಿಕೊಂಡು ಓಡಾಡುತ್ತಿದ್ದೀರಾ ಎಂದು ಪ್ರಶ್ನಿಸಿದರಲ್ಲದೆ, ಇದೇ ವಿಚಾರವಾಗಿ ಸಿಎಂ ಅವರನ್ನು ಜೈಲಿಗೆ ಕಳುಹಿಸುವ ಸಂಚು ನಡೆಯುತ್ತಿದೆ ಎಂಬ ಗಂಭೀರ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

Tags:

error: Content is protected !!