Bidar

ಬೀದರ್‌ನಲ್ಲಿ ಅಕ್ರಮ ದೇಶೀ ಪಿಸ್ತೂಲ್ ಹಾಗೂ ಮಾರಕಾಸ್ತ್ರ ಮಾರಾಟ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, ₹6.73 ಲಕ್ಷ ಮೌಲ್ಯದ ಆಯುಧಗಳು ಜಪ್ತಿ

Share

ಅಕ್ರಮವಾಗಿ ದೇಶೀ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೀದರ್ ನಗರ ಪೊಲೀಸರು ಬಂಧಿಸಿದ್ದು, ಅವರಿಂದ ₹6.73 ಲಕ್ಷ ಮೌಲ್ಯದ ಐದು ದೇಶೀ ಪಿಸ್ತೂಲ್‌ಗಳು, 26 ಜೀವಂತ ಮದ್ದುಗುಂಡುಗಳು, 10 ಖಾಲಿ ಕೇಸ್‌ಗಳು, ಐದು ತಲವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದರು.

ನಗರದ ಮಂಗಲಪೇಟೆ ಬಡಾವಣೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ನಿನ್ನೆ ಸಂಜೆ ನಗರದ ಹೊರವಲಯದಲ್ಲಿರುವ ಜ್ಞಾನಸುಧಾ ಶಾಲೆ ಸಮೀಪದ ರಿಂಗ್ ರೋಡ್ ಬಳಿ ಇಬ್ಬರು ವ್ಯಕ್ತಿಗಳು ಪಿಸ್ತೂಲ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ತಮ್ಮ ಮಾರ್ಗದರ್ಶನದಲ್ಲಿ ವಿಶೇಷ ತಂಡ ದಾಳಿ ನಡೆಸಿತು ಎಂದರು. ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ, ಅವರ ಬಳಿ ಇದ್ದ ಮೂರು ಬ್ಯಾಗ್‌ಗಳಲ್ಲಿ ಐದು ದೇಶೀ ಪಿಸ್ತೂಲ್, 26 ಜೀವಂತ ಮದ್ದುಗುಂಡುಗಳು, 10 ಖಾಲಿ ಮದ್ದುಗುಂಡಿನ ಕೇಸ್‌ಗಳು ಹಾಗೂ ಐದು ತಲವಾರುಗಳು ಪತ್ತೆಯಾದವು.ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಈ ಶಸ್ತ್ರಾಸ್ತ್ರಗಳನ್ನು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಖರೀದಿಸಿ, ಹೆಚ್ಚಿನ ಬೆಲೆಗೆ ಬೀದರ್‌ನಲ್ಲಿ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಪಿಸ್ತೂಲ್‌ಗಳನ್ನು ಪರೀಕ್ಷಿಸುವ ಉದ್ದೇಶದಿಂದ 10 ಸುತ್ತು ಗುಂಡುಗಳನ್ನು ಹಾರಿಸಿರುವುದಾಗಿಯೂ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.

ಈ ಸಂಬಂಧ ಒಟ್ಟು ನಾಲ್ವರು ಆರೋಪಿಗಳ ವಿರುದ್ಧ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳ ಪತ್ತೆ ಹಾಗೂ ಪ್ರಕರಣದ ತನಿಖೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ಪ್ರಶಂಸಿಸಿದರು.ಸಾರ್ವಜನಿಕರು ಯಾವುದೇ ಅಕ್ರಮ ಆಯುಧ, ಮದ್ದುಗುಂಡು ಅಥವಾ ಮಾದಕ ವಸ್ತುಗಳ ಖರೀದಿ, ಮಾರಾಟ ಹಾಗೂ ಸಾಗಣೆಯಲ್ಲಿ ತೊಡಗಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡುತ್ತದೆ ಎಂದು ಎಸ್.ಪಿ ಹೇಳಿದರು.

ಹೆಚ್ಚುವರಿ ಎಸ್.ಪಿ ಚಂದ್ರಕಾಂತ್ ಪೂಜಾರಿ, ಅಪರಾಧ ವಿಭಾಗದ ಡಿ.ಎಸ್.ಪಿ ಎನ್.ಡಿ. ಸನ್ನದಿ, ಡಿ.ವೈ.ಎಸ್.ಪಿ ದೂದಪೀರ್ ಮುಲ್ಲಾ, ಡಿ.ಆರ್. ಡಿ.ಎಸ್.ಪಿ ಶರಣಪ್ಪ, ಮಾರ್ಕೆಟ್ ಠಾಣೆ ಸಿಪಿಐ ಫಾಲಾಕ್ಷಯ್ಯ, ಪಿ.ಎಸ್.ಐ ಸಯ್ಯದ್ ತಸ್ಲೀಮ್ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Tags:

error: Content is protected !!