ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ, ಎಲ್ಲರೂ ಹೊಸ ಹೊಸ ಕೌಶಲ್ಯಗಳನ್ನು ಬಯಸುತ್ತಾರೆ ಅದರಂತೆ ನಮ್ಮಲ್ಲಿ ಪ್ರತಿಯೊಬ್ಬರು ಕಲೆ ಮತ್ತು ಕೌಶಲ್ಯ ಕಲೆತುಕೊಂಡರೆ ನಾವು ಯಾರ ಮೇಲೂ ಅವಲಂಬಿತರಾಗಬೇಕಾಗಿಲ್ಲ ಎಂದು ರಾಜಯೋಗಿನಿ ಬಿಕೆ ಅನುರಾಧಾ ತಿಳಿಸಿದರು.


ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ನಗರದ ಸರಕಾರಿ ಪಾಲಿಟೆಕ್ನಿಕ್ ಎನ್ ಎಸ್ ಎಸ್ ಹಾಗೂ ಬ್ರಹ್ಮಕುಮಾರೀಸ್ ಯೂಥ್ ವಿಂಗ್ ಸಹಯೋಗದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮಬಳಿ ಕಲಾಕೌಶಲ್ಯ ಹೊಂದಿದ್ದರೆ
ನಾವೇ ಉದ್ಯೋಗ ದಾತರಾಗಬಹುದು. ಭಾರತ ಯುವಕರ ದೇಶ. ನಮ್ಮ ಕೌಶಲ್ಯವೇ ವಿಕಸಿತ ಭಾರತ ಕನಸನ್ನು ನನಸಾಗಿ ಮಾಡುತ್ತದೆ. ಕಾಲೇಜು ಮುಗಿದರೂ ಕಲಿಯುವುದನ್ನು ನಿಲ್ಲಿಸಬಾರದು. ಜೀವನದಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಇರಬೇಕು. ಶಾಲಾ ಕಾಲೇಜು ಪರೀಕ್ಷೆ ಅಥವಾ ನಿಜ ಜೀವನದಲ್ಲಿ ಯಾವುದೇ ಪರಿಸ್ಥಿತಿಗಳಲ್ಲಿ ವಿಫಲವಾದರೂ ಭಯಪಡಬಾರದು. ಮತ್ತೆ ಮತ್ತೆ ಪ್ರಯತ್ನಿಸಿ ಯಶಸ್ವಿಯಾಗಬೇಕು ಪ್ರತಿ ಕೌಶಲ್ಯವು ಅಭ್ಯಾಸದಿಂದ ಬರುತ್ತದೆ. ನಮ್ಮ ಕನಸು ದೊಡ್ಡದಾಗಿರಲಿ, ಆದರೆ ಅದಕ್ಕಿಂತ ದೊಡ್ಡದಾಗಿರಲಿ ನಮ್ಮ ಕೌಶಲ್ಯ, ಏಕೆಂದರೆ ಕೌಶಲ್ಯವು ಕನಸನ್ನು ನನಸಾಗಿ ಮಾಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಮಹಾದೇವ್ ಮೇದಾರ್ ಉಪ ಪ್ರಾಂಶುಪಾಲರು ಕರ್ನಾಟಕ ಪಬ್ಲಿಕ್ ಶಾಲೆ, ವಡಗಾಂವ ಮಾತನಾಡುತ್ತಾ ನಮ್ಮ ಭಾರತ ಶೇಕಡ 60 ರಷ್ಟು ಯುವಕರಿಂದ ಕೂಡಿದೆ. ಸದೃಢ ಭಾರತ ನಿರ್ಮಾಣವಾಗಲು ಇಂದಿನ ವಿದ್ಯಾರ್ಥಿಗಳು ಸದೃಢರಾಗಬೇಕು. ಯಾವುದೇ ವ್ಯಸನಕ್ಕೆ ಬಲಿಯಾಗದೆ ತಂದೆ ತಾಯಿಗಳನ್ನು ಮತ್ತು ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ವಿದ್ಯಾರ್ಥಿ ಜೀವನದಲ್ಲಿ ಶ್ರಮಪಟ್ಟು ಅಭ್ಯಾಸ ಮಾಡಿದಾಗ ಮಾತ್ರ ಮುಂದಿನ ಜೀವನ ಶ್ರೇಷ್ಠ ಹಾಗೂ ಸುಖಮಯ ಆಗುತ್ತದೆ. ವಿದ್ಯಾರ್ಥಿಗಳು ಮೆಡಿಟೇಶನ್ ಅನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರೆ ಮಾತ್ರ ನೆನಪಿನ ಶಕ್ತಿ ಹೆಚ್ಚಿಗೆ ಆಗುತ್ತದೆ ಎಂದರು.
ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ಪಾಟೀಲ ಅವರು ಮಾತನಾಡಿ ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರಿಗೂ ವರ್ತಮಾನ ಸಮಯದಲ್ಲಿ ಮೆಡಿಟೇಶನ್ ಅವಶ್ಯಕತೆ ಇದೆ. ಏಕೆಂದರೆ ಎಲ್ಲರೂ ಒಂದಿಲ್ಲೊಂದು ಒತ್ತಡದಲ್ಲಿ ಸಿಲುಕುತ್ತಿದ್ದಾರೆ. ಅದರ ಪರಿಣಾಮ ಶರೀರದ ಮೇಲೆ ಬೀರುತ್ತದೆ. ಆದ್ದರಿಂದ ಅಭ್ಯಾಸ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಈಶ್ವರಿಯ ವಿಶ್ವವಿದ್ಯಾಲಯದವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಬಿಕೆ ಮಹಾಂತೇಶ್ ಅಣ್ಣನವರು ಬ್ರಹ್ಮಕುಮಾರೀಸ್ ಆಧ್ಯಾತ್ಮಿಕ ಚಳುವಳಿಯ ಪರಿಚಯ ನೀಡಿದರು.
ಬಿಕೆ ಸಾಧನ ಅಕ್ಕನವರು ಮೆಡಿಟೇಶನ್ ಬಗ್ಗೆ ತಿಳಿಸಿ ಎಲ್ಲರಿಗೂ ಶಾಂತಿಯ ಅನುಭವ ಮಾಡಿಸಿದರು. ಬಿಕೆ ಶ್ರೀಕಾಂತ್ ವ್ಯಸನಮುಕ್ತ ಸಮಾಜದ ಬಗ್ಗೆ ಪ್ರತಿಜ್ಞೆ ಮಾಡಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಘಟಕದ ಸಂಯೋಜನಾಧಿಕಾರಿ ವಿದ್ಯಾಧರ ಲಾಟಕರ ಹಾಗೂ ಶ್ರೀ ಜಾಫರ್ ಮುಲ್ಲಾ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ದೀಪಾ ತಿಮ್ಮಾಪುರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವೀಣಾ ಪಾಟೀಲ್ ವಂದಿಸಿದರು.
