ಬಾಗಲಕೋಟೆ ಮತ್ತು ಬಾದಾಮಿ ಭಾಗದಲ್ಲಿ ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಲಪ್ರಭಾ ನದಿ ಒಣಗುತ್ತಿರುವುದರಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ನವಿಲುತೀರ್ಥ ಜಲಾಶಯದಿಂದ ತಕ್ಷಣವೇ 1 ಟಿಎಂಸಿ ನೀರು ಬಿಡುವಂತೆ ಆಗ್ರಹಿಸಿ ಬಾದಾಮಿ ತಾಲೂಕಿನ ನದಿ ದಂಡೆಯ ರೈತರು ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಬಾಗಲಕೋಟೆ ಮತ್ತು ಬಾದಾಮಿ ಭಾಗದ ರೈತರು ತಮ್ಮ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ನೀರಿನ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.


ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಈ ವರ್ಷ ಎಲ್ನಿನೋ ಪರಿಣಾಮದಿಂದಾಗಿ ಮಳೆ ಅತ್ಯಂತ ಕಡಿಮೆಯಾಗಿದ್ದು, ಜಲಾಶಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗಿಲ್ಲ ಎಂದು ತಿಳಿಸಿದರು. ಸದ್ಯ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನೀರು ಬಿಡುಗಡೆ ಮಾಡುವ ನಿರ್ಧಾರವನ್ನು ಬೆಳಗಾವಿ ಡಿಸಿ ಆಗಿ ನಾನು ಮಾತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಎಲ್ಲಾ ಡ್ಯಾಂಗಳು ಮತ್ತು ನದಿಗಳ ಸಂಪೂರ್ಣ ನಿಯಂತ್ರಣವನ್ನು ಪ್ರಾದೇಶಿಕ ಆಯುಕ್ತರಿಗೆ (RC) ನೀಡಲಾಗಿದೆ. ಆದ್ದರಿಂದ ರೈತ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ತಮ್ಮ ಮನವಿಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬೇಕು. ಮುಂಬರುವ ತಿಂಗಳುಗಳಲ್ಲಿ ಹಾಗೂ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಗತ್ಯತೆ ಮತ್ತು ಸದ್ಯ ಲಭ್ಯವಿರುವ ನೀರಿನ ಮಟ್ಟವನ್ನು ಪರಿಶೀಲಿಸಿ ಪ್ರಾದೇಶಿಕ ಆಯುಕ್ತರು ನೀರು ಬಿಡುಗಡೆ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸುತ್ತಾ, ರೈತರ ಪರವಾಗಿ ತಾವೂ ಕೂಡ ಆರ್ಸಿಯವರಿಗೆ ಮನವಿ ತಲುಪಿಸಿ ನೀರು ಬಿಡುಗಡೆಗೆ ವಿನಂತಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣವೇ ಪ್ರಸ್ತಾವನೆ ಕಳುಹಿಸಲಿದ್ದು, ನವಿಲುತೀರ್ಥ ಜಲಾಶಯದಿಂದ ಎಷ್ಟು ಪ್ರಮಾಣದ ನೀರು ಬಿಡಲು ಸಾಧ್ಯವೋ ಅಷ್ಟು ನೀರನ್ನು ಬಿಡುಗಡೆ ಮಾಡಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ದೂರವಾಣಿ ಮೂಲಕವೂ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ರೈತರು ಬೆಳೆ ಬೆಳೆದಿದ್ದು, ಜಾನುವಾರುಗಳಿಗೆ ನೀರಿನ ತುರ್ತು ಅಗತ್ಯವಿರುವುದರಿಂದ ಶೀಘ್ರವಾಗಿ ನೀರು ಬಿಡುವಂತೆ ವಿನಂತಿಸಿದರು.
