ಖಾನಾಪುರ ತಾಲೂಕಿನ ದೊಡ್ಡ ಗ್ರಾಮಗಳಲ್ಲೊಂದಾದ ಗರ್ಲಗುಂಜಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿ ಗರ್ಲಗುಂಜಿ ಗ್ರಾಮ ವಿಕಾಸ ಸಮಿತಿ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದಾಗಿ ಯುವ ಪೀಳಿಗೆ ವ್ಯಸನಕ್ಕೆ ತುತ್ತಾಗುತ್ತಿದ್ದು, ಕುಡುಕರು ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ. ಶಾಲೆಗಳ ಆವರಣದಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಒಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆಯಾಗಿದೆ ಹಾಗೂ ಗರ್ಲಗುಂಜಿ-ನಂದಿಹಳ್ಳಿ ರಸ್ತೆಯಲ್ಲಿ ಮದ್ಯಪಾನ ಮಾಡಿ ಗದ್ದಲ ಸೃಷ್ಟಿಸುವುದು, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವುದು ಮತ್ತು ಹೊಲಗದ್ದೆಗಳಲ್ಲಿ ಖಾಲಿ ಬಾಟಲಿಗಳನ್ನು ಎಸೆಯುವ ಕೃತ್ಯಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಿಯಮಿತವಾಗಿ ಗಸ್ತು ತಿರುಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದ್ದು, ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷ ಗೋಪಾಲ ಪಾಟೀಲ್, ಮಾಜಿ ತಾ.ಪಂ. ಸದಸ್ಯ ಪಾಂಡುರಂಗ ಸಾವಂತ್, ಮಾಜಿ ಗ್ರಾ.ಪಂ. ಸದಸ್ಯ ಹಣಮಂತ ಮೇಲಗೆ, ಪ್ರಮುಖರಾದ ಪರಶರಾಮ ಚೌಗುಲೆ, ಅಜಿತ್ ಪಾಟೀಲ್, ಪ್ರಸಾದ್ ಪಾಟೀಲ್, ಸುರೇಶ ಮೇಲಗೆ, ಬಜರಂಗದಳ ತಾಲೂಕು ಅಧ್ಯಕ್ಷ ನಂದಕುಮಾರ್ ನಿಟ್ಟುರಕರ್, ಪಿ.ಕೆ.ಪಿ.ಎಸ್ ಅಧ್ಯಕ್ಷ ಸಂಜಯ್ ಪಾಟೀಲ್, ಮಾಜಿ ಅಧ್ಯಕ್ಷ ರಾಜು ಸಿದ್ಧಾಣಿ, ನಿರ್ದೇಶಕ ಶಾಂತಾರಾಮ್ ಮೇಲಗೆ, ವಿನೋದ ಕುಂಬಾರ, ಶಿವಾಜಿ ಕೊಲ್ಕಾರ್, ಗಂಗಾರಾಮ್ ಒಡೆಬೈಲ್ಕರ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
