ಧಾರವಾಡದಲ್ಲಿ ತಡರಾತ್ರಿ ಭೀಕರ ಕೊಲೆಯೊಂದು ನಡೆದಿದ್ದು, ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಬಾರಾಕೊಟ್ರಿ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯ ಹಾಗೂ ಅವರ ಮಗನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ವೈದ್ಯರು ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಾಕೊಟ್ರಿ ರಸ್ತೆಯ ರಂಕಾ ಸ್ಟೆಲ್ಲೊ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ಸಂಭವಿಸಿದೆ. ಚಿರಾಯು ಖಾಸಗಿ ಆಸ್ಪತ್ರೆಯ ಅನೆಸ್ತೆಸಿಯಾ ವೈದ್ಯರಾದ ಡಾ. ಕಿರಣ ಹೊನ್ನಣ್ಣವರ ಹಾಗೂ ಅವರ ಮಗ ನೇಹಿತ್ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗ ಮತ್ತು ಪತಿಯ ಪಕ್ಕದಲ್ಲೇ ಬೆಡ್ ಮೇಲಿದ್ದ ಪತ್ನಿ ಪ್ರಿಯಾಂಕಾ ಅವರಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ಕಲೆಹಾಕುತ್ತಿದ್ದಾರೆ. ತಪಾಸಣೆ ವೇಳೆ ಬಾಲಕ ನೇಹಿತ್ ಜೀವಂತವಾಗಿರುವುದು ಪತ್ತೆಯಾಗಿದ್ದು, ಸ್ವತಃ ಪೊಲೀಸ್ ಆಯುಕ್ತರೇ ಮಗುವನ್ನು ಎತ್ತಿಕೊಂಡು ಬಂದು ತಕ್ಷಣವೇ ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
