ಬಿಡದಿಯಲ್ಲಿ ಟೌನ್‌ಶಿಪ್ ಹೆಸರಿನಲ್ಲಿ ಒಂಬತ್ತು ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನೀತಿಯ ವಿರುದ್ಧ ರೈತರು ಕೆರಳಿ ಕೆಂಡವಾಗಿದ್ದಾರೆ. ಪ್ರಾಣ ಹೋದರೂ ನಮ್ಮ ತಾಯಿ ಸಮಾನವಾದ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯ ಆವರಣದಲ್ಲಿ ಪೊರಕೆ ಪೂಜೆ ಮಾಡುವ ಮೂಲಕ ಬಿಡದಿಯಲ್ಲಿ ಟೌನ್‌ಶಿಪ್ ಹೆಸರಿನಲ್ಲಿ ಒಂಬತ್ತು ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನೀತಿಯನ್ನು ಖಂಡಿಸಲಾಯಿತು.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯಲ್ಲಿ ಸುಮಾರು ಒಂಬತ್ತು ಸಾವಿರ ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಹಿರಿಯ ರೈತ ಹೋರಾಟಗಾರ ಚೂನಪ್ಪ ಪೂಜಾರಿ ಅವರು, ಈ ಭಾಗದ ಭೂಮಿ ಅತ್ಯಂತ ಫಲವತ್ತಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ರೈತರು ಇಲ್ಲಿ ತೆಂಗು, ಅಡಿಕೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ನಮಗೆ ಎಕರೆಗೆ ಹತ್ತು ಕೋಟಿ ರೂಪಾಯಿ ಪರಿಹಾರ ಕೊಟ್ಟರೂ ನಮ್ಮ ಜೀವನದ ಆಧಾರವಾಗಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರೈತರ ಒಪ್ಪಿಗೆಯಿಲ್ಲದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೂ ಸರ್ವೇ ಕಾರ್ಯಕ್ಕೆ ಮುಂದಾಗಿರುವುದನ್ನು ಕಟುವಾಗಿ ಖಂಡಿಸಿದ ಅವರು, ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಕೈಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರು ಭಾಗಿಯಾಗಿದ್ಧರು
