ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ಭೀಕರ ವಿದ್ಯುತ್ ಅವಘಡವೊಂದು ಸಂಭವಿಸಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ದಂಪತಿಗಳು ಜಂಟಿಯಾಗಿ ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಮೃತರನ್ನು ಮುತ್ತಪ್ಪ ಶ್ರೀಶೈಲ ಮುಗೋಳಖೋಡ (42) ಮತ್ತು ರಾಜಶ್ರೀ ಮುಗೋಳಖೋಡ (36) ಎಂದು ಗುರುತಿಸಲಾಗಿದೆ. ಎಂದಿನಂತೆ ತಮ್ಮ ಹೊಲದಲ್ಲಿ ದೈನಂದಿನ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ವಿದ್ಯುತ್ ತಂತಿ ತಗುಲಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ದುರಂತದ ವಿಷಯ ತಿಳಿಯುತ್ತಿದ್ದಂತೆ ಮೂಡಲಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಟ್ಟಿಗೆ ದುಡಿದು ಸಂಸಾರ ಮುನ್ನಡೆಸುತ್ತಿದ್ದ ದಂಪತಿಗಳಿಬ್ಬರು ಏಕಕಾಲದಲ್ಲಿ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ಆಘಾತ ತಂದಿದ್ದು, ಮೃತರ ಮನೆತನದವರ ಆಕ್ರಂದನ ಮುಗಿಲು ಮುಟ್ಟಿದೆ. ನಾಗನೂರು ಗ್ರಾಮದಲ್ಲಿ ಸದ್ಯ ಶೋಕದ ಛಾಯೆ ಮೂಡಿದೆ.
