ಕರ್ನಾಟಕ ರಾಜ್ಯದಲ್ಲಿ ಸುಮಾರು 25 ಲಕ್ಷ ಕುಂಬಾರ ಸಮಾಜದ ಮತದಾರರಿದ್ದರೂ, ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಮಾಜವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಹುಚ್ಚೇಶ ಕುಂಬಾರ್ ಗಂಭೀರ ಆರೋಪ ಮಾಡಿದ್ದಾರೆ. ರಾಜಕಾರಣಿಗಳು ಸಮಾಜದ ಅಭಿವೃದ್ಧಿಗೆ ಸಮರ್ಪಕ ಸಹಕಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾಜದ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಜೈನ ಸಮಾಜ ಭವನದಲ್ಲಿ ನಡೆದ 12ನೇ ಶತಮಾನದ ಕಾಯಕಯೋಗಿ ಶಿವಶರಣ ಶ್ರೀ ಕುಂಬಾರ ಗುಂಡಯ್ಯ ಅವರ 15ನೇ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹುಚ್ಚೇಶ ಕುಂಬಾರ್, ಕುಂಬಾರ ಸಮಾಜದ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಸ್ಥಾಪಿಸಿದ್ದರೂ ಸಹ ಇದುವರೆಗೆ ಅದಕ್ಕೆ ಸಮರ್ಪಕವಾಗಿ ಅನುದಾನ ನೀಡಿಲ್ಲ. ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಒದಗಿಸಬೇಕು. ರಾಜ್ಯದಲ್ಲಿ ಸಮಾಜಕ್ಕೆ ಸೂಕ್ತ ಸ್ಥಾನಮಾನ ನೀಡದಿದ್ದರೂ, ಮತದಾನದ ಸಂದರ್ಭದಲ್ಲಿ ಮಾತ್ರ ಸಮಾಜವನ್ನು ನೆನಪಿಸಿಕೊಳ್ಳಲಾಗುತ್ತಿದೆ. ಇದು ಸಮಾಜದ ಬಾಂಧವರ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ ಎಂದರು.

ಇದೇ ವೇಳೆ ಬೀದರ ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ್ ಮಾತನಾಡಿ, ಕುಂಬಾರ ಸಮಾಜವು ಮಣ್ಣಿನಿಂದ ಪಾತ್ರೆಗಳನ್ನು ತಯಾರಿಸಿ ಜೀವನ ಸಾಗಿಸುವ ಪರಿಶ್ರಮಿ ಸಮಾಜವಾಗಿದೆ. ಸಮಾಜದ ಏಳಿಗೆಗಾಗಿ ಸರ್ಕಾರ ಹೆಚ್ಚಿನ ಸೌಲಭ್ಯ ಒದಗಿಸಬೇಕು ಮತ್ತು ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಧಾರವಾಡದ ಮಹಿಳಾ ಮುಖಂಡೆ ಹಾಗೂ ಸ್ತ್ರೀರೋಗ ತಜ್ಞೆ ಡಾ. ಕಮಲಾಬಾಯಿ ಕುಂಬಾರ್ ಮಾತನಾಡಿ, ರಾಜಕೀಯ ಪಕ್ಷಗಳು ಕುಂಬಾರ ಸಮಾಜವನ್ನು ಕೇವಲ ಮತಗಳಿಗಾಗಿ ಬಳಸಿಕೊಳ್ಳದೆ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇನ್ನು ಕಾರ್ಯಕ್ರಮಕ್ಕೂ ಮುನ್ನ ಕುಂಬಾರ ಸಮಾಜದ ಸುಮಂಗಲಿಯರು ಕೃಷ್ಣಾ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಜಲಕಲಶ ಯಾತ್ರೆ ನಡೆಸಿದರು. ನಂತರ ಮಹಾದೇವ ಮಂದಿರದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಭಕ್ತಿಭಾವದಿಂದ ಕಾಯಕಯೋಗಿಯ ಸ್ಮರಣೋತ್ಸವವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಕುಂಬಾರ್, ಡಾ. ಚಂದ್ರಶೇಖರ್ ಯೆಡ್ದೂರ್, ಡಾ. ಪಾಂಡುರಂಗ ಕುಂಬಾರ್, ಶಿವಾನಂದ ಕುಂಬಾರ್, ಸಂಗಣ್ಣ ಕುಂಬಾರ್, ನಿವೃತ್ತ ಡಿವೈಎಸ್ಪಿ ಸೋಮಲಿಂಗ ಕುಂಬಾರ್, ಲಕ್ಷ್ಮಣ ಕುಂಬಾರ್ ಸೇರಿದಂತೆ ಅನೇಕ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಸ್ಮರಣೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಆನಂದ ಕುಂಬಾರ್, ಸುಭಾಷ್ ಕುಂಬಾರ್ ಹಾಗೂ ಸಮಾಜದ ಪ್ರಮುಖರು ಆಗಮಿಸಿದ ಗಣ್ಯರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ಸತ್ಕರಿಸಿದರು.
