ಬೆಳಗಾವಿಯ ಗಣಪತ್ ಗಲ್ಲಿಯ ಸರ್ಕಾರಿ ಮರಾಠಿ ಶಾಲೆ ನಂ. 2ರ 2003-04ನೇ ಸಾಲಿನ ಹಳೇ ವಿದ್ಯಾರ್ಥಿಗಳು ತಮ್ಮ ಶಾಲೆಯ ಮಕ್ಕಳಿಗೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ. ಶಾಲೆಯ ಸದ್ಯದ ವಿದ್ಯಾರ್ಥಿಗಳಿಗೆ ಮಳೆಗಾಲದ ಹಿನ್ನೆಲೆಯಲ್ಲಿ ಕೊಡೆ ಹಾಗೂ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ತಮ್ಮ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.


ಬೆಳಗಾವಿಯ ಗಣಪತ್ ಗಲ್ಲಿಯಲ್ಲಿರುವ ಸರ್ಕಾರಿ ಮರಾಠಿ ಶಾಲೆ ನಂ. 2ರ 2003-04ರ ಬ್ಯಾಚ್ನ ಹಳೇ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಹಿತ್ಯ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಅವಶ್ಯಕವಿರುವ ಪುಸ್ತಕಗಳು, ಕಂಪಾಸ್ ಬಾಕ್ಸ್, ಎಕ್ಸಾಮ್ ಪ್ಯಾಡ್ ಹಾಗೂ ಮಳೆಗಾಲಕ್ಕೆ ಉಪಯುಕ್ತವಾಗುವ ಛತ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳಾದ ಧನಂಜಯ್ ಮೋರೆ, ವಿಜಯ್ ಮೋಹಿತೆ ಮತ್ತು ಅರವಿಂದ್ ಚಿಕ್ಕೋರ್ಡೆ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಈ ಶ್ಲಾಘನೀಯ ಕಾರ್ಯಕ್ಕೆ ಹಳೇ ವಿದ್ಯಾರ್ಥಿಗಳಾದ ಪೂಜಾ ಜಾಧವ್ ಹಾಗೂ ಕುಲದೀಪ್ ತಾಶಿಲ್ದಾರ್ ಅವರು ವಿಶೇಷ ಸಹಕಾರ ನೀಡಿದ್ದು, ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರು ಹಳೇ ವಿದ್ಯಾರ್ಥಿಗಳ ಈ ಉದಾತ್ತ ಸೇವೆಯನ್ನು ಸ್ಮರಿಸಿ ಆಡಳಿತ ಮಂಡಳಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.
