ಬೆಳಗಾವಿಯಲ್ಲಿ ಹಿಡಕಲ್ ಜಲಾಶಯದ ಭೂ ಸಂತ್ರಸ್ತರ ಹೋರಾಟ ತೀವ್ರಗೊಂಡಿದೆ. ಅಧಿಕಾರಿಗಳ ವಿಳಂಬ ನೀತಿ ಹಾಗೂ ಕೋಟ್ಯಂತರ ರೂಪಾಯಿ ಲಂಚದ ಬೇಡಿಕೆಯಟ್ಟಿದ್ದಾರೆಂದು ಆರೋಪಿಸಿ ನೂರಾರು ರೈತರು ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.

ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ ಉತ್ತರ ವಲಯದ ಮುಖ್ಯ ಅಭಿಯಂತರರ ಕಾರ್ಯಾಲಯದ ಮುಂದೆ ಜಮಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ನೇತೃತ್ವ ವಹಿಸಿದ್ದ ಬಾಳೇಶ್ ಮಾವನೂರು ಮಾತನಾಡಿ, ಒಟ್ಟು 394 ಎಕರೆ 26 ಗುಂಟೆ ಜಮೀನಿಗೆ ಇದುವರೆಗೆ ಯಾವುದೇ ಪರಿಹಾರ ಧನ ಸಿಕ್ಕಿಲ್ಲ. ಆದರೆ ಅಧಿಕಾರಿಗಳು ಅಸಲಿ ದಾಖಲೆಗಳನ್ನು ಬದಿಗಿಟ್ಟು, ಸ್ವಂತವಾಗಿ 150 ಎಕರೆ ಕಡಿತಗೊಳಿಸಿ ವರದಿ ಸಿದ್ಧಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಚೆಕ್ ಮೂಲಕ ಹಣ ನೀಡಲಾಗಿದೆ ಎನ್ನುವ ಅಧಿಕಾರಿಗಳು, ಯಾರ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂಬ ಅಸಲಿ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಅವರು, ಅಧಿಕಾರಿಗಳ ದಾರಿ ತಪ್ಪಿಸುವ ತಂತ್ರದಿಂದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ ಎಂದು ದೂರಿದರು.
ಕಳೆದ 10-12 ವರ್ಷಗಳಿಂದ ನ್ಯಾಯಕ್ಕಾಗಿ ಅಲೆಯುತ್ತಿರುವ ರೈತರಿಗೆ ಅಧಿಕಾರಿಗಳ ವಿಳಂಬ ನೀತಿ ಶಾಪವಾಗಿ ಪರಿಣಮಿಸಿದೆ. ಫೈಲ್ ಮೂವ್‌ಮೆಂಟ್ ಮಾಡಲು ಅಧಿಕಾರಿಗಳು ಬರೋಬ್ಬರಿ 2 ರಿಂದ 5 ಕೋಟಿ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಕ್ಯಾಬಿನೆಟ್‌ಗೆ ಕಳುಹಿಸುವ ಮುನ್ನವೇ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ, ಶುದ್ಧ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಸರಿಯಾದ ವರದಿ ನೀಡುವವರೆಗೂ ಕಚೇರಿಯಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು, ನಾಳೆಯಿಂದ 22 ಗ್ರಾಮದ ಮಹಿಳೆಯರು ಹಾಗೂ ದನ-ಕರುಗಳೊಂದಿಗೆ ಬಂದು ಇಲ್ಲೇ ಮೊಕ್ಕಾಂ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಹಿಡಕಲ್ ಜಲಾಶಯಕ್ಕೆ ಜಮೀನು ನೀಡಿದ ನೂರಾರು ರೈತರು ಭಾಗಿಯಾಗಿದ್ಧರು.
