ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಹಾನಗರ ಪಾಲಿಕೆಯಲ್ಲಿ ಮತದಾರರ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಹಾಗೂ ಚುನಾವಣಾ ಅಧಿಕಾರಿಗಳೂ ಆಗಿರುವ ಕಾರ್ತಿಕ್ ಎಂ ಅವರು ತಿಳಿಸಿದ್ದಾರೆ.

ಸೋಮವಾರ ಮಹಾನಗರ ಪಾಲಿಕೆ ಆವರಣದಲ್ಲಿ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಬಿ ಎಲ್ ಓ ಗಳು ಕೊಡಲಾಗಿರುವ ಗಣತಿ ನಮೂನೆಗಳನ್ನು ಜುಲೈ 29 ರ ಒಳಗಾಗಿ ಕಡ್ಡಾಯವಾಗಿ ಹಿಂತಿರುಗಿಸಬೇಕು. ನಮೂನೆ ಭರ್ತಿ ಮಾಡಲು ಮಾಹಿತಿ ಅಗತ್ಯವಿದ್ದರೆ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಹಾಗೂ ದಕ್ಷಿಣ ಭಾಗದ ಸ. ಚುನಾವಣೆ ಅಧಿಕಾರಿಗಳಾದ ಡಾ. ಸಿದ್ದು ಹುಲ್ಲೋಳಿಯವರು ಮಾತನಾಡಿ,2002 ರ ಮತದಾರರ ಪಟ್ಟಿ ನೋಡಿ ಮಾಹಿತಿ ಪಡೆದು ಭರ್ತಿ ಮಾಡಬೇಕು. ಮೊಬೈಲ್ ನಲ್ಲಿಯೂ ಅವಕಾಶವಿದೆ.
ಗೊಂದಲಗಳಿದ್ದರೆ ಬಿಎಲ್ಓ ಗಳಲ್ಲಿ ಮಾಹಿತಿ ಕೇಳಬಹುದು. ಆಗದಿದ್ದರೆ ಸಹಾಯವಾಣಿ ಕೇಂದ್ರದ ಸಹಕಾರ ಪಡೆಯಬೇಕು. ಈಗಾಗಲೇ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶೇ.90 ರಷ್ಟು ನಮೂನೆಗಳನ್ನು ವಿತರಿಸಲಾಗಿದ್ದು, ಡಿಜಿಟಲೈ ಜೇಶನ್ ಕಾರ್ಯವೂ ವೇಗವಾಗಿ ನಡೆಯುತ್ತಿದೆ.
ಮತದಾರರು ಸಹಕಾರ ನೀಡುತ್ತಿದ್ದು, ಅವಧಿ ಒಳಗೆ ಎಸ್ಐಆರ್ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.
ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ಹಾಗೂ ಉತ್ತರ ಭಾಗದ ಸ. ಚುನಾವಣಾ ಅಧಿಕಾರಿ ಉದಯಕುಮಾರ ಟಿ. ಮಾತನಾಡಿ, ನಮೂನೆ ವಿತರಣೆ ನಿಧಾನಗತಿಯಲ್ಲಿ ನಡೆಯುತ್ತಿದ್ದರೆ ಇನ್ನಿತರ ಸಮಸ್ಯೆಗಳಿದ್ದರೆ ಆ ವಾರ್ಡ್ ಗಳಿಗೆ ಮೇಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಅಪೂರ್ಣ ಮಾಹಿತಿ ಭರ್ತಿ ಮಾಡದೆ ಬಿ ಎಲ್ ಓ ಗಳ ಹಾಗೂ ಸಹಾಯವಾಣಿ ಕೇಂದ್ರದ ಸಹಕಾರ ಪಡೆಯಬೇಕೆಂದು ಹೇಳಿದರು. ಪಾಲಿಕೆಯ ಪರಿಷತ್ ಕಾರ್ಯದರ್ಶಿ, ಹಾಗೂ ಉತ್ತರ ಭಾಗದ ಚುನಾವಣಾ ಅಧಿಕಾರಿಗಳಾದ
ಶ್ರೀಮತಿ ಲಕ್ಷ್ಮೀ ನಿಪ್ಪಾಣಿಕರ್ ಇತರರು ಉಪಸ್ಥಿತರಿದ್ದರು.
