ರಾಜ್ಯದಲ್ಲಿ ಬರಗಾಲದ ನಡುವೆಯೂ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗಿವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿಪಕ್ಷಗಳ ಟೀಕೆಗೆ ಹಾವೇರಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅವರು, ಸಿದ್ಧರಾಮಯ್ಯ ಭಿನ್ನಾಭಿಪ್ರಾಯದ ಪ್ರಶ್ನೆ ರಾಜ್ಯದ ಸಮಸ್ಯೆಯಲ್ಲ ಎಂದಿದ್ದಾರೆ.

ಹಾವೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಬರಗಾಲ ಘೋಷಣೆಗೆ ಸರ್ಕಾರದ ಬಳಿ ಹಣವಿಲ್ಲ ಎಂಬ ಆರ್. ಅಶೋಕ್ ಹೇಳಿಕೆಯನ್ನು ತಳ್ಳಿಹಾಕಿದರು. “ಹಣವಿಲ್ಲದಿದ್ದರೆ ಈ ಮಟ್ಟದ ಅಭಿವೃದ್ಧಿ ಕೆಲಸಗಳು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ ಅವರು, ಬ್ರಿಜ್ ಕಂ ಬ್ಯಾರೇಜ್‌ಗಳ ದುರಸ್ತಿ ಮತ್ತು ನೀರಿನ ಲಭ್ಯತೆಗೂ ಮುನ್ನವೇ ಅಧಿಕಾರಿಗಳು ಸಕಲ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರ್.ಎಸ್.ಎಸ್. ಸಭೆಗೆ ಸಹಕಾರ ನೀಡುತ್ತಿರುವ ವಿಚಾರವಾಗಿ ಅಭಿಮಾನಿಗಳಲ್ಲಿ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ನಾವು ಜಿಲ್ಲಾ ಉಸ್ತುವಾರಿ ಸಚಿವರು, ಇದು ನಮ್ಮ ಜವಾಬ್ದಾರಿ. ಇಲ್ಲಿ ಅಭಿಮಾನಿ ಅಥವಾ ಸಂಘಟನೆಯ ಪ್ರಶ್ನೆ ಬರುವುದಿಲ್ಲ” ಎಂದರು. ಯಾವುದೇ ರೀತಿಯ ಗಲಾಟೆಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಅವರು ಸ್ಪಷ್ಟಪಡಿಸಿದರು. ಬೈಟ್
ಇದೇ ವೇಳೆ ಬೆಳಗಾವಿ ಜಿಲ್ಲೆಯ ರಾಜಕೀಯ ಸಮೀಕರಣದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಬೆಳಗಾವಿ ಜಿಲ್ಲೆಗೆ ಮತ್ತೊಂದು ಹೆಚ್ಚುವರಿ ಸಚಿವ ಸ್ಥಾನದ ಅಗತ್ಯತೆ ಖಂಡಿತವಾಗಿಯೂ ಇದೆ ಎಂದರು. ಆದರೆ ಆ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ತಿಳಿಸಿದ ಅವರು, ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ಕುರಿತ ಪ್ರಶ್ನೆಗೆ, ಇದು ರಾಜ್ಯದ ಸಮಸ್ಯೆಯಲ್ಲ, ನಮ್ಮ ವೈಯಕ್ತಿಕ ವಿಚಾರ ಎಂದು ಮಾರ್ಮಿಕವಾಗಿ ಉತ್ತರಿಸಿದರು.
