ಖಾನಾಪುರ ತಾಲೂಕಿನ ಹತ್ತರಗುಂಜಿ ಗ್ರಾಮದ ಹಕ್ಕಿಪಿಕ್ಕಿ ಆದಿವಾಸಿ ಹಾಗೂ ಕಾತ್ಕರಿ ಸಮುದಾಯಗಳ ವಸತಿ ಪ್ರದೇಶಕ್ಕೆ ಬೆಳಗಾವಿ ಜಿ.ಪಂ. ಸಿಇಒ ರಾಹುಲ್ ಶಿಂಧೆ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೂಲಭೂತ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಹಕ್ಕಿಪಿಕ್ಕಿ ಆದಿವಾಸಿ ಮತ್ತು ಕಾತ್ಕರಿ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಇಂದು ಅಧಿಕಾರಿಗಳ ಭೇಟಿ ಸಾಧ್ಯವಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ತಾಲೂಕಿನ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳ ತಂಡದೊಂದಿಗೆ ಹತ್ತರಗುಂಜಿ ಗ್ರಾಮದ ಇಂದಿರಾ ನಗರಕ್ಕೆ ಖುದ್ದಾಗಿ ಭೇಟಿ ನೀಡಿದರು. ಈ ವೇಳೆ ಎರಡೂ ಸಮುದಾಯಗಳ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ಸಮಸ್ಯೆ, ಆಧಾರ್ ಕಾರ್ಡ್ ಹಾಗೂ ವಸತಿ ನಿವೇಶನ ಸೇರಿದಂತೆ ಪ್ರಮುಖ ಮೂಲಭೂತ ಅವಶ್ಯಕತೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ, ಅವುಗಳನ್ನು ಶೀಘ್ರವೇ ಪರಿಹರಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ಈ ಮಹತ್ವದ ಭೇಟಿಯ ಸಂದರ್ಭದಲ್ಲಿ ತಾಲೂಕಿನ ಪ್ರಮುಖ ಅಧಿಕಾರಿಗಳಾದ ಇಒ ರಮೇಶ್ ಮೇತ್ರಿ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ್ ಚೆನ್ನೈನವರ್, ಬಿಇಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪಿಡಿಒ ರೇಷ್ಮಾ ಪಾನೇವಾಲಿ ಉಪಸ್ಥಿತರಿದ್ದರು. ಸಮುದಾಯದ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದ ಡಿಎಸ್‌ಎಸ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹಿಂಡಲಗಿ, ತಾಲೂಕು ಅಧ್ಯಕ್ಷ ರಾಘವೇಂದ್ರ ಚಲವಾದಿ, ಪಂಚಾಯತ್ ಸದಸ್ಯ ರವಿ ಮಾದಾರ್ ಸೇರಿದಂತೆ ಇಲಾಖಾ ಅಧಿಕಾರಿಗಳು ಹಾಗೂ ಆದಿವಾಸಿ ಜನಾಂಗದ ಪ್ರಮುಖರು ಈ ಸಂದರ್ಭದಲ್ಲಿ ಸಿಇಒ ಅವರಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
