Vijaypura

ನವೆಂಬರ್ ಕ್ರಾಂತಿ ಆಗದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯಲ್ಲ’: ವಿಜಯೇಂದ್ರ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ

Share

ರಾಜ್ಯ ಬಿಜೆಪಿಯಲ್ಲಿ “ನವೆಂಬರ್ ಕ್ರಾಂತಿ” ಅನಿವಾರ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಪಾದಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನವೆಂಬರ್‌ನಲ್ಲಿ ಬದಲಾವಣೆ ಆಗದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯುವುದಿಲ್ಲ. ವಿಜಯೇಂದ್ರ ನಾಯಕತ್ವದಲ್ಲಿ ಪಕ್ಷ ಮುಗಿದು ಹೋಗುತ್ತದೆ. ಆಂತರಿಕ ಸಮೀಕ್ಷೆ ನಡೆಸಿದರೆ ಅವರನ್ನು ಹೊರಗೆ ಹಾಕುತ್ತಾರೆ, ಇಲ್ಲವಾದರೆ ಬಿಜೆಪಿಯ ಅಸ್ತಿತ್ವವೇ ಖಲ್ಲಾಸ್ ಆಗುತ್ತದೆ” ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯ ವಿಪ್ ಕುರಿತು ಮಾತನಾಡಿದ ಯತ್ನಾಳ್, “ಓಟು ಹಾಕಿ ಬಂದ ನಂತರ ಹಿಂದಿನ ದಿನಾಂಕ ಹಾಕಿ ವಿಪ್ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಭಯದಿಂದ ಹೀಗೆ ಮಾಡಿದ್ದಾರೆ. ಡುಪ್ಲಿಕೇಟ್ ಸಹಿ ವಿಚಾರವನ್ನು ನಾನು ಪ್ರಸ್ತಾಪಿಸುತ್ತೇನೆ ಎಂದಿದ್ದಕ್ಕೆ ಈ ಬೆಳವಣಿಗೆ ನಡೆದಿದೆ. ಡಿ.ಕೆ. ಶಿವಕುಮಾರ್ ಎದುರು ಕೈಕಟ್ಟಿ ನಿಂತು ಸಹಿ ಮಾಡಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.

ಇತ್ತೀಚಿನ ಪಕ್ಷದ ಕಾರ್ಯಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, “ರಟ್ಟಿಹಳ್ಳಿಯಲ್ಲಿ ವಿಜಯೇಂದ್ರ ಕಾರ್ಯಕ್ರಮಕ್ಕೆ ಕೇವಲ 45 ಜನ ಮಾತ್ರ ಬಂದಿದ್ದರು. ಅವರೆಲ್ಲ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೇಳುವವರೇ. ನಾನು ಭೇಟಿ ನೀಡಿದಾಗ ಸಾವಿರಾರು ಜನ ಸೇರಿದ್ದರು. ಅದು ಬಿ.ಸಿ. ಪಾಟೀಲ್ ಕ್ಷೇತ್ರ. ಕ್ಷೇತ್ರದಲ್ಲಿ ಹಿಂದೂ ಯುವಕನ ಹತ್ಯೆಯಾದರೂ ಅವರು ಕುಟುಂಬಕ್ಕೆ ಭೇಟಿ ನೀಡಿಲ್ಲ. ಇಂಥ ರೀತಿಯಲ್ಲಿ ಪಕ್ಷ ನಡೆಸಿದರೆ ಉಳಿಯುವುದಿಲ್ಲ” ಎಂದು ಟೀಕಿಸಿದರು. ರಾಜ್ಯ ಉಸ್ತುವಾರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, “ಹೊಸ ಉಸ್ತುವಾರಿ ಬಗ್ಗೆ ಮಾಹಿತಿ ಇಲ್ಲ. ಹಿಂದಿನ ಉಸ್ತುವಾರಿ ಅರುಣ್ ಸಿಂಗ್ ನಮಗೆ ಅಪಾಯಿಂಟ್‌ ಮೆಂಟ್ ಕೊಡುತ್ತಿರಲಿಲ್ಲ. ವಿಜಯೇಂದ್ರರನ್ನು ಹೊಗಳುವುದೇ ಅವರ ಕೆಲಸವಾಗಿತ್ತು. ಬಳಿಕ ನನ್ನನ್ನೇ ಪಕ್ಷದಿಂದ ಹೊರಗೆ ಹಾಕಿದರು. ಎಷ್ಟು ದಿನ ನಿಷ್ಠಾವಂತ ಕಾರ್ಯಕರ್ತರನ್ನು ಹೊರಗಿಡುತ್ತೀರಿ?” ಎಂದು ಪ್ರಶ್ನಿಸಿದರು. ವಿಜಯಪುರದಲ್ಲಿ ಮೇಯರ್, ಕಾರ್ಪೊರೇಟರ್ ಸೇರಿ ದೊಡ್ಡ ತಂಡವೇ ಇದೆ. ಅವರೆಲ್ಲರನ್ನೂ ಹೊರಗೆ ಹಾಕಲು ಸಾಧ್ಯವೇ? ಕಾರ್ಯಕರ್ತರ ಭಾವನೆ ಅರಿಯದ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ” ಎಂದರು. ತಾವು ಬಿಜೆಪಿಗೆ ಮತ ಹಾಕಿರುವ ಕುರಿತು ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದಿದ್ದನ್ನು ಉಲ್ಲೇಖಿಸಿದ ಅವರು, “ನಾನು ಪತ್ರ ಬರೆಯದೆ ಇದ್ದರೆ ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು. ಯಾರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬುದು ಮುಂದೆ ಎಲ್ಲರಿಗೂ ಗೊತ್ತಾಗುತ್ತದೆ” ಎಂದು ಹೇಳಿದರು.

Tags:

error: Content is protected !!