ತಾವು ಮರಳಿ ಬಿಜೆಪಿಗೆ ಸೇರ್ಪಡೆಯಾಗುವ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆ ಬಿಜೆಪಿ ಉಚ್ಚಾಟಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಮೊನ್ನೆ ಬಿಜೆಪಿಗೆ ಮತ ಹಾಕಿದ್ದೇನೆ. ನಾನು ಯಾವ ಪಕ್ಷದ ಶಾಸಕನಾಗಿದ್ದೇನೋ ಆ ಪಕ್ಷಕ್ಕೆ ಮತ ಹಾಕಿದ್ದೇನೆ. ಇದರಿಂದ ಕೆಲವರ ಎದೆ ಒಡೆದಂತಾಗಿದೆ,” ಎಂದು ಹೇಳಿದರು. ಕೆಲವರು ಕಾಂಗ್ರೆಸ್‌ನಿಂದ ಹಣ ಹಾಗೂ ಅಭಿವೃದ್ಧಿಗೆ ಅನುದಾನ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಬಿಜೆಪಿಯ ಕೆಲ ಶಾಸಕರು ಕೂಡ ಮತ ಹಾಕಿದ್ದಾರೆ. ನಮ್ಮ ಮಾಹಿತಿಯ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷರೇ ಮತ ಹಾಕಿಸಿರುವ ಸಾಧ್ಯತೆಯಿದೆ ಎಂದು ಯತ್ನಾಳ ಆರೋಪಿಸಿದರು.
“ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದಂತೆ ಮತ ಹಾಕದಿದ್ದರೆ ನನ್ನ ಹಗರಣಗಳನ್ನು ಹೊರತೆಗೆಯುತ್ತಾರೆ ಎಂಬ ಭಯದಿಂದ ಬಿಜೆಪಿ ರಾಜ್ಯಾಧ್ಯಕ್ಷರು ನಡೆದುಕೊಂಡಿದ್ದಾರೆ. ಮತದಾನಕ್ಕೂ ಮುನ್ನ ವಿಪ್ ನೀಡಬೇಕಿತ್ತು. ಆದರೆ ಮತದಾನದ ನಂತರ ವಿಪ್ ಜಾರಿಗೊಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷರು ನಾಚಿಕೆಗೇಡಿನ ಕೆಲಸ ಮಾಡಿದ್ದಾರೆ,” ಎಂದು ಟೀಕಿಸಿದರು. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಮಾಹಿತಿ ನೀಡಿರುವುದಾಗಿ ತಿಳಿಸಿದ ಅವರು, ಈ ಹಿನ್ನೆಲೆಯಲ್ಲಿ ಕೆಲವು ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ತಾವು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬ ಅನುಮಾನ ಮೂಡಿಸುವ ರೀತಿಯ ಪೋಸ್ಟ್‌ಗಳನ್ನು ಹಾಕಿಸಲಾಗಿದೆ ಎಂದು ಆರೋಪಿಸಿದರು. ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ, “ನನ್ನ ವೈಯಕ್ತಿಕ ವಿಚಾರ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತನಾಡಿದರೆ, ನಿಮ್ಮ ಕುಟುಂಬದ ಇತಿಹಾಸ ನನ್ನ ಬಳಿ ಇದೆ. ಅಗತ್ಯ ಬಂದರೆ ಅದನ್ನೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಬೇಕಾಗುತ್ತದೆ. ನಿಮ್ಮ ಚೇಲಾಗಳಿಂದ ನನ್ನ ವಿರುದ್ಧ ಏನಾದರೂ ಪೋಸ್ಟ್ ಮಾಡಿಸಿದರೆ, ಅದಕ್ಕಿಂತ ತೀಕ್ಷ್ಣವಾಗಿ ನಾನು ಉತ್ತರ ನೀಡುತ್ತೇನೆ,” ಎಂದು ಎಚ್ಚರಿಕೆ ನೀಡಿದರು.
