ಬೆಳಗಾವಿ-ಗೋಕಾಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದು, ನಿಲ್ಲಿಸದೇ ಪರಾರಿಯಾಗಿದ್ದ ಭೀಕರ ‘ಹಿಟ್ ಆಂಡ್ ರನ್’ ಪ್ರಕರಣವನ್ನು ಮಾರಿಹಾಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ತನಿಖೆಯ ಆಧಾರದ ಮೇಲೆ ಅಪಘಾತ ಎಸಗಿದ ಟಿಪ್ಪರ್ ವಾಹನ ಸೇರಿದಂತೆ ಆರೋಪಿ ಚಾಲಕನನ್ನು ಕಡ್ಡಾಯವಾಗಿ ವಶಕ್ಕೆ ಪಡೆಯಲಾಗಿದೆ.

ಜುಲೈ 1ರಂದು ಮುಂಜಾನೆ ಬೆಳಗಾವಿ-ಗೋಕಾಕ್ ರಸ್ತೆಯ ಮುಚ್ಛಂಡಿ ಗ್ರಾಮದ ಹಣ್ಣಿನ ಅಂಗಡಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಚಂದಗಡ ನಿವಾಸಿ ರಾಜು ರಾಮಾ ಅಪ್ಪೇಕರ (46) ಎಂಬುವವರಿಗೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು, ಸ್ಥಳದಲ್ಲೇ ಮರಣ ಹೊಂದಲು ಕಾರಣವಾಗಿ ಪರಾರಿಯಾಗಿತ್ತು.
ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಅಪಘಾತ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಗಿಳಿಹಸಿರು ಇಂಜಿನ್ ಮತ್ತು ಕೆಂಪು ಬಾಡಿ ಹೊಂದಿದ್ದ KA-22/B-1610 ನಂಬರಿನ ಟಿಪ್ಪರ್ ವಾಹನ ಅಪಘಾತ ಮಾಡಿರುವುದು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಖಾನಾಪುರ ತಾಲೂಕಿನ ಪ್ರಭುನಗರ ನಿವಾಸಿ, ಪ್ರಸ್ತುತ ಕಣಬರ್ಗಿಯಲ್ಲಿರುತ್ತಿದ್ದ ಟಿಪ್ಪರ್ ಚಾಲಕ ಅದೃಶ್ಯಪ್ಪ ಗಂಗಯ್ಯ ಮಾಸ್ತಮರ್ಡಿ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪು ಒಪ್ಪಿಕೊಂಡಿದ್ದಾನೆ. ವೈಜ್ಞಾನಿಕ ತನಿಖೆಯ ಮೂಲಕ ಕೇವಲ ಕೆಲವೇ ದಿನಗಳಲ್ಲಿ ಪ್ರಕರಣ ಪತ್ತೆಹಚ್ಚಿದ ಮಾರಿಹಾಳ ಪೊಲೀಸ್ ತಂಡದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
