Vijaypura

ಪತ್ನಿಯನ್ನು ಕರೆತರಲು ಬಂದ ಪತಿ ಮೇಲೆ ಮಾರಣಾಂತಿಕ ಹಲ್ಲೆ; ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ

Share

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ತವರು ಮನೆಯಿಂದ ಕರೆತರಲು ಬಂದ ಪತಿಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತನನ್ನು ಬಾಬುಸಾಬ್ ಜಮಾದಾರ್ (35) ಎಂದು ಗುರುತಿಸಲಾಗಿದೆ.

ಐದು ವರ್ಷಗಳ ಹಿಂದೆ ತನ್ನ ಸ್ವಂತ ಸಹೋದರಿಯ ಮಗಳಾದ ಸೌಂದರ್ಯಳನ್ನು ಬಾಬುಸಾಬ್ ವಿವಾಹವಾಗಿದ್ದ. ಆದರೆ ದಾಂಪತ್ಯ ಕಲಹದಿಂದ ಕಳೆದ ಐದು ತಿಂಗಳುಗಳಿಂದ ಸೌಂದರ್ಯ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಭಾನುವಾರ ರಾತ್ರಿ ಪತ್ನಿಯನ್ನು ವಾಪಸ್ ಕರೆದುಕೊಂಡು ಹೋಗಲು ಬಾಬುಸಾಬ್ ತನ್ನ ಸ್ನೇಹಿತ ಅಪ್ಪಾಲಾಲ ಮಕಾಸಿಯೊಂದಿಗೆ ಹಲಸಂಗಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಸೌಂದರ್ಯ, ಆಕೆಯ ತಾಯಿ ಮೀನಾಕ್ಷಿ, ಸಹೋದರ ವಿಕಾಸ್ ಹಾಗೂ ರಫೀಕ್ ಸೇರಿ ಬಾಬುಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಬಾಬುಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಬಾಬುಸಾಬ್ ಜೊತೆಯಲ್ಲಿದ್ದ ಅಪ್ಪಾಲಾಲ ಮಕಾಸಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಬಳಿಕ ಆರೋಪಿತರು ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಇನ್ಸ್‌ಪೆಕ್ಟರ್ ಪರಶುರಾಮ ಮನಗೂಳಿ ಹಾಗೂ ಝಳಕಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

Tags:

error: Content is protected !!